ಮಂಗಳೂರು| ಸ್ಟ್ರೀಟ್ ಫುಡ್ ಫೆಸ್ಟ್ನಲ್ಲಿ ಸಂಸದ ಚೌಟ, ಶಾಸಕ ಕಾಮತ್ ಬೆಂಬಲಿಗರ ನಡುವಿನ ಮುಸುಕಿನೊಳಗಿನ ಗುದ್ದಾಟ ಸ್ಫೋಟ

ಬ್ರಿಜೇಶ್ ಚೌಟ - ವೇದವ್ಯಾಸ ಕಾಮತ್
ಮಂಗಳೂರು: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಬೆಂಬಲಿಗರ ನಡುವಿನ ಮುಸುಕಿ ನೊಳಗಿನ ಗುದ್ದಾಟ ಇದೀಗ ಸ್ಫೋಟಗೊಂಡಂತೆ ಕಂಡು ಬಂದಿದೆ.
ಇಲ್ಲಿ ನಡೆಯುತ್ತಿರುವ ಮಂಗಳೂರು ಸ್ಟ್ರೀಟ್ ಫುಡ್ ಫೆಸ್ಟ್ನಲ್ಲಿ ಸಂಸದ ಮತ್ತು ಶಾಸಕರ ಬೆಂಬಲಿಗರ ನಡುವೆ ಜಟಾಪಟಿ ನಡೆದಿರುವುದಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ.
ಈ ಘಟನೆಯ ಬಳಿಕ ಶಾಸಕ ವೇದವ್ಯಾಸ್ ಕಾಮತ್ ಮತ್ತು ಸಂಸದ ಬ್ರಿಜೇಶ್ ಚೌಟ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ರೀತಿಯಲ್ಲಿ ಕಮೆಂಟ್ಗಳು ಕಾಣಿಸಿಕೊಂಡಿದೆ.
ದಕ್ಷಿಣ ಕನ್ನಡ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ಟ್ರೀಟ್ ಫುಡ್ ಫೆಸ್ಟ್ಗೆ ತನ್ನ ಬೆಂಬಲಿಗರೊಂದಿಗೆ ಆಗಮಿಸಿದ್ದ ಬ್ರಿಜೇಶ್ ಚೌಟ ಅವರನ್ನು ಶಾಸಕ ವೇದವ್ಯಾಸ ಕಾಮತ್ ವೇದಿಕೆಗೆ ಆಹ್ವಾನಿಸಿದಾಗ ಸಂಸದರು ವೇದಿಕೆ ಹತ್ತಲು ನಿರಾಕರಿಸಿದರೆನ್ನಲಾಗಿದೆ. ಸಂಸದರಿಗೆ ವೇದಿಕೆ ಹತ್ತದಂತೆ ಅವರ ಆಪ್ತರೊಬ್ಬರು ಸೂಚಿಸಿದರೆಂದು ತಿಳಿದು ಬಂದಿದೆ.
ಸಂಸದರು ವೇದಿಕೆಗೆ ಬರಲು ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿ ಚೌಟ ಬೆಂಬಲಿಗ ಹಾಗೂ ಶಾಸಕ ಕಾಮತ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದು ಬಂದಿದೆ.
ಈ ಘಟನೆಯ ಬಳಿಕ ಶಾಸಕ ಹಾಗೂ ಸಂಸದರ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವಾರ್ ಕಂಡು ಬಂದಿದೆ.







