ಮಂಗಳೂರು: ಜಪಾನ್ ವಾಣಿಜ್ಯ ಪ್ರತಿನಿಧಿಗಳು ಕೆಸಿಸಿಐ ಭೇಟಿ

ಮಂಗಳೂರು: ಮಂಗಳೂರು ಹಾಗೂ ಜಪಾನ್ ಮಧ್ಯೆ ವಾಣಿಜ್ಯ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಜಪಾನ್‌ನ ವಾಣಿಜ್ಯ ಪ್ರತಿನಿಧಿಗಳು ಮಂಗಳೂರಿನ ಕೆನರಾ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭ ಸಂಸದ ಬ್ರಿಜೇಶ್ ಚೌಟ ಅವರು, ಜಪಾನ್ ಪ್ರತಿನಿಧಿಗಳನ್ನು ಗೌರವಿಸಿ ಮಂಗಳೂರು ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಪೂರ್ಣ ನೆರವು ನೀಡುವ ಭರವಸೆ ನೀಡಿದರಲ್ಲದೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೂ ಜಪಾನ್ ವಾಣಿಜ್ಯಾಸಕ್ತರ ವಿಚಾರವನ್ನು ಗಮನಕ್ಕೆ ತರುವುದಾಗಿ ತಿಳಿಸಿದರು.
ಶಾಸಕ ವೇದವ್ಯಾಸ ಕಾಮತ್ ಜಪಾನ್‌ನ ವಾಣಿಜ್ಯ ಪ್ರತಿನಿಧಿಗಳು ಮಂಗಳೂರು ಪ್ರದೇಶದಲ್ಲಿ ಆಸಕ್ತಿ ವಹಿಸಿರುವುದನ್ನು ಸ್ವಾಗತಿಸಿದರು. ಕೆಸಿಸಿಐ ಆಧ್ಯಕ್ಷ ಆನಂದ್ ಜಿ.ಪೈ ಅವರು ಮಂಗಳೂರು ಪರಿಸರದಲ್ಲಿರುವ ವಾಣಿಜ್ಯ ಚಟುವಟಿಕೆಗಳು, ಕೆಸಿಸಿಐನ ಪಾತ್ರದ ಬಗ್ಗೆ ವಿವರಿಸಿ, ಈ ಪ್ರದೇಶದಲ್ಲಿ ಹೊಸ ವಾಣಿಜ್ಯ ಉದ್ಯಮ ಸ್ಥಾಪನೆಗೆ ಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಜಪಾನ್ ನಿಯೋಗದ ನೇತೃತ್ವವನ್ನು ನಿಟ್ಟೆ ಟೆಕ್ನಿಕಲ್ ಎಜುಕೇಶನ್‌ನ ಉಪಾಧ್ಯಕ್ಷ ಡಾ.ಗೋಪಾಲ ಮುಗೆರಾಯ ವಹಿಸಿದ್ದು, ಅವರ ಜೊತೆಯಲ್ಲಿ ಇಂಟರ್‌ನ್ಯಾಷನಲ್ ಕೊಲಾಬರೇಷನ್‌ನ ಏಷ್ಯಾ-ಪೆಸಿಫಿಕ್ ಪ್ರದೇಶದ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್, ಜಪಾನ್‌ನ ಪ್ರಿಫೆಕ್ಚುವಲ್ ಅಸೆಂಬ್ಲಿ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಕೊಮಾತ್ಸು ಶಿನ್ಯ, ಜಪಾನ್‌ನ ಇಂಡಸ್ಟ್ರಿಯಲ್ ಟೆಕ್ನಾಲಜಿ ಇನ್ನೊವೇಷನ್ ವಿಭಾಗದ ನಿರ್ದೇಶಕ ಕತ್ಸುತೋಷಿ ಸೀವಾ ಮುಂತಾದವರಿದ್ದರು.
ಕೆಸಿಸಿಐ ಉಪಾಧ್ಯಕ್ಷ ಪಿ.ಬಿ.ಅಹಮದ್ ಮುದಾಸರ್, ಕಾರ್ಯದರ್ಶಿ ಆದಿತ್ಯ ಪದ್ಮನಾಭ ಪೈ ಪಾಲ್ಗೊಂಡರು.