ಮಂಗಳೂರು: ಬೀದಿ ಬದಿ ವ್ಯಾಪಾರಿಗಳನ್ನು ಧರ್ಮದ ಆಧಾರದಲ್ಲಿ ವಿಂಗಡಿಸಿದ ಪೊಲೀಸ್ ಇಲಾಖೆ
► ಹಕ್ಕೊತ್ತಾಯ ಸಭೆ ನಡೆಸಿದ ಸಂಘಟಕರ ವಿರುದ್ಧದ ಎಫ್‌ಐಆರ್ ಪ್ರತಿಯಲ್ಲಿ ಧರ್ಮ ಉಲ್ಲೇಖ ► ಪೊಲೀಸರ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಆಕ್ರೋಶ

ಮಂಗಳೂರು: ರಾಷ್ಟ್ರೀಯ ಬೀದಿ ವ್ಯಾಪಾರಿಗಳ ದಿನಾಚರಣೆಯ ಅಂಗವಾಗಿ ನಗರದ ಪುರಭವನದ ಬಳಿ ಮಂಗಳವಾರ ಬೀದಿ ವ್ಯಾಪಾರಿಗಳ ಹಕ್ಕೊತ್ತಾಯ ಸಭೆಯನ್ನು ನಡೆಸಿದ ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವಾಗ ಎಡವಟ್ಟು ಮಾಡಿಕೊಂಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.
ಪಾಂಡೇಶ್ವರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್‌ರನ್ನು ಒಂದನೇ ಆರೋಪಿ ಎಂದು ಗುರುತಿಸಲಾಗಿದ್ದರೆ, ಎರಡನೆ ಆರೋಪಿಗಳಾಗಿ ಇತರ ಮುಸ್ಲಿಂ ಬೀದಿ ಬದಿ ವ್ಯಾಪಾರಿಗಳು ಎಂದು ಉಲ್ಲೇಖಿಸಿದ್ದಾರೆ.
ಮಂಗಳವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂಘದ ಅಧ್ಯಕ್ಷ ಮುಜಾಫರ್ ಅಹ್ಮದ್, ಮಾಜಿ ಅಧ್ಯಕ್ಷ ಹಸನ್ ಬೆಂಗ್ರೆ, ಉಪಾಧ್ಯಕ್ಷ ವಿಜಯ ಜೈನ್, ಮುಖಂಡರಾದ ಹಸನ್ ಕುದ್ರೋಳಿ, ಹಂಝ, ಸಿಕಂದರ್ ಬೇಗ್, ವಿಜಯ ಜೈನ್, ಎಂ.ಎನ್. ಶಿವಪ್ಪ, ಚಂದ್ರಶೇಖರ ಭಟ್, ಮೇಬಲ್ ಡಿಸೋಜ, ಫಿಲೋಮಿನಾ, ಲೀನಾ ಡಿಸೋಜ, ಗುಡ್ಡಪ್ಪ, ಹರೀಶ್ ಬೈಕಂಪಾಡಿ, ಯಶೋಧರ ಬೈಕಂಪಾಡಿ, ಬಾಲಕೃಷ್ಣ ಸುರತ್ಕಲ್, ಮುತ್ತುರಾಜ್ ಮತ್ತಿತರರು ಪಾಲ್ಗೊಂಡಿದ್ದರು. ಆದರೆ ಪಾಂಡೇಶ್ವರ ಠಾಣೆಯ ಎಸ್ಸೈ ನೀಡಿದ ದೂರಿನಂತೆ ಎಫ್‌ಐಆರ್ ದಾಖಲಿಸಿದ ಪೊಲೀಸರು "ಅದರ್ ಮೆಂಬರ್ಸ್ ಆಫ್ ಸ್ಟ್ರೀಟ್ (ಎ2) ಮುಸ್ಲಿಂ ವೆಂಡರ್ ಕಮಿಟಿ ಮಂಗಳೂರು" ಎಂದು ಉಲ್ಲೇಖಿಸಿ ಎಡವಟ್ಟು ಮಾಡಿದ್ದಾರೆ.
ಬೀದಿಬದಿ ವ್ಯಾಪಾರಸ್ಥರು ಹಕ್ಕೊತ್ತಾಯ ಸಭೆ ನಡೆಸಿದ್ದಕ್ಕೆ ನನ್ನ ಮತ್ತು ಇತರ ಸಂಗಾತಿಗಳ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ. ನಾವು ಸರ್ವ ಧರ್ಮದ ಬೀದಿ ವ್ಯಾಪಾರಿಗಳು ಸೇರಿ ಹಕ್ಕೊತ್ತಾಯ ಸಭೆ ನಡೆಸಿದ್ದೆವು. ಆದರೆ ಸಂಘಿ ಮನಸ್ಥಿತಿಯ ಪೊಲೀಸ್ ಕಮಿಷನರ್ ನಾನು ಮತ್ತು ಮುಸ್ಲಿಂ ಬೀದಿ ವ್ಯಾಪಾರಿಗಳು ಎಂದು ಎಫ್‌ಐಆರ್ ದಾಖಲು ಮಾಡಿ ಬೀದಿ ವ್ಯಾಪಾರಿಗಳನ್ನು ಹಿಂದೂ-ಮುಸ್ಲಿಂ ಎಂದು ಒಡೆದು ಆಳುವ ದಾರಿಯನ್ನು ಹಿಡಿದಿದ್ದಾರೆ. ಕಾನೂನು ಪರಿಪಾಲನೆ ಮಾಡಬೇಕಾದ ಪೊಲೀಸರೇ ಮತೀಯ ದ್ವೇಷ ಹರಡಿದರೆ ನಾಗರಿಕ ಸಮಾಜ ಎಂತಹ ಪರಿಸ್ಥಿತಿ ಎದುರಿಸಬೇಕಾದೀತು ಎಂದು ಬಿ.ಕೆ. ಇಮ್ತಿಯಾಝ್ ಪ್ರಶ್ನಿಸಿದ್ದಾರೆ.







