ಮಂಗಳೂರು ವಿವಿ - ಕಣಚೂರು ಶಿಕ್ಷಣ ಸಂಸ್ಥೆ ನಡುವೆ ಶೈಕ್ಷಣಿಕ ಒಪ್ಪಂದ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಡುವೆ ಶೈಕ್ಷಣಿಕ ಹಾಗೂ ಸಂಶೋಧನೆ ವಿಷಯಕ್ಕೆ ಪೂರಕವಾಗಿ ಒಡಂಬಡಿಕೆಯು ಶುಕ್ರವಾರ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಮಾತನಾಡಿ, ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಮಂಗಳೂರು ವಿವಿ ನಡುವೆ ನಡೆದ ಶೈಕ್ಷಣಿಕ, ಸಂಶೋಧನೆ ವಿಷಯಕ್ಕೆ ಸಂಬಂಧಿಸಿ ದಂತೆ ನಡೆದ ಒಡಂಬಡಿಕೆಯು ಒಂದು ಮಹತ್ವದ ಹೆಜ್ಜೆಯಾಗಿದ್ದು, ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ಮಾತ್ರವಲ್ಲದೆ ಈ ಒಪ್ಪಂದವು ಸಾಮಾಜಿಕ ಸಂಬಂಧಗಳನ್ನು ವಿಸ್ತರಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಕಣಚೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಅವರು ಮಾತನಾಡಿ, ಮಂಗಳೂರು ವಿವಿ ಮತ್ತು ಕಣಚೂರು ಸಂಸ್ಥೆಯು ಸಮೀಪದಲ್ಲೇ ಇದ್ದು ಇದೀಗ ಒಡಂಬಡಿಕೆಯ ಮೂಲಕ ಶೈಕ್ಷಣಿಕವಾಗಿ ಮತ್ತಷ್ಟು ಹತ್ತಿರವಾಗಿದ್ದೇವೆ. ಈ ಒಡಂಬಡಿಕೆಯಿಂದ ಎರಡು ಶಿಕ್ಷಣ ಸಂಸ್ಥೆಗಳಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ, ಜಗತ್ತಿಗೇ ಶೈಕ್ಷಣಿಕ, ಸಂಶೋಧನೆಯ ಪ್ರಯೋಜನ ಸಿಗುವಂತಾಗಲಿ ಎಂದರು.
ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಅವರು ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯವು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ ಮುನ್ನಡೆಯುತ್ತಿದೆ. ಶೈಕ್ಷಣಿಕ , ಸಂಶೋಧನೆಯ ಕ್ಷೇತ್ರದ ಒಡಂಬಡಿಕೆಯಿಂದ ಅಧ್ಯಯನ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಕಣಚೂರು ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕಣಚೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಶಹನಾಝ್ ಮನ್ನಿಪ್ಪಾಡಿ, ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಐಕ್ಯೂಎಸಿ ಸಂಯೋಜಕಕಿ ಡಾ.ಮೋನಿಕಾ ಸದಾನಂದ, ಕಲಾ ನಿಕಾಯದ ಡೀನ್ ಡಾ.ಪರಿಣಿತ, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಡಾ.ಗಣೇಶ್ ಸಂಜೀವ, ಪ್ರಾಧ್ಯಾಪಕ ಡಾ.ನರಂಸಿಂಹಯ್ಯ, ಪ್ರಾಧ್ಯಾಪಕ ಡಾ.ಮಂಜಯ್ಯ, ವೀಣಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ಪ್ರೊ.ಜಯರಾಜ್ ಅಮೀನ್ ಅವರು ವಂದಿಸಿದರು.







