ಮಂಗಳೂರು| ಜಾತಿ ನಿಂದನೆ, ಪೋಕ್ಸೊ ಸುಳ್ಳು ಪ್ರಕರಣ ದಾಖಲು: ಸಂತ್ರಸ್ತೆಯಿಂದ ಪರಿಹಾರ ಧನ ವಾಪಸ್ ಪಡೆಯಲು ನ್ಯಾಯಾಲಯ ಆದೇಶ

ಮಂಗಳೂರು: ಜಾತಿ ನಿಂದನೆ ಮತ್ತು ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಯುವಕನೊಬ್ಬನ ಮೇಲೆ ಕೇಸು ದಾಖಲಿಸಿ, ಸಮಾಜ ಕಲ್ಯಾಣ ಇಲಾಖೆಯಿಂದ 2.50 ಲಕ್ಷ ರೂ. ಪಡೆದ ಸಂತ್ರಸ್ತೆಯಿಂದ ಪರಿಹಾರ ಧನ ವಾಪಸ್ ಪಡೆದು ಕೊಳ್ಳುವಂತೆ ದ.ಕ. ಜಿಲ್ಲಾಧಿಕಾರಿಗೆ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ 1 (ಪೋಕ್ಸೊ) ಆದೇಶಿಸಿದೆ.
*2024ರ ಮಾ.21ರಂದು ಸಂಜೆ 6:45ಕ್ಕೆ ತನ್ನ ಮನೆಗೆ ಬಂಟ್ವಾಳ ತಾಲೂಕಿನ ತೇಜಸ್ (26) ಎಂಬಾತ ಅಕ್ರಮ ಪ್ರವೇಶ ಮಾಡಿ ವಿನಾ ಕಾರಣ ವಾಗ್ವಾದಕ್ಕಿಳಿದ್ದಲ್ಲದೆ, ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದ ಮತ್ತು ಜಾತಿ ನಿಂದನೆಗೈದು ಮನೆ ಮಂದಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಬಾಲಕಿಯ ತಾಯಿಯು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅದರಂತೆ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ 1 (ಪೋಕ್ಸೊ)ರ ನ್ಯಾಯಾಧೀಶ ವಿನಯ ದೇವರಾಜ್ ವಿಚಾರಣೆ ನಡೆಸಿದ್ದರು.
ಅಪ್ರಾಪ್ತೆಯ ತಾಯಿಯು ಆರೋಪಿ ತೇಜಸ್‌ನಿಂದ ಸಾಲ ಮತ್ತು ಚಿನ್ನಾಭರಣ ಸಹಿತ 5.50 ಲಕ್ಷ ರೂ.ಮೌಲ್ಯದ ಸೊತ್ತು ಗಳನ್ನು ಪಡೆದುಕೊಂಡಿದ್ದರು. ಅದನ್ನು ತೇಜಸ್ ಆಗಾಗ ಕೇಳುತ್ತಿದ್ದು, ಈ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ ಯಾಗಿತ್ತು ಎನ್ನಲಾಗಿದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಅಪ್ರಾಪ್ತೆಯ ತಾಯಿಯು ತೇಜಸ್‌ನ ವಿರುದ್ಧ ಲೈಂಗಿಕ ಕಿರುಕುಳ, ಜಾತಿ ನಿಂದನೆ, ಹಲ್ಲೆ ದೂರು ನೀಡಿದ್ದಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಪಡೆದುಕೊಂಡಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಾಗ ಬಾಲಕಿಯ ತಾಯಿಯು ಯುವಕನಿಂದ ಸಾಲ, ಚಿನ್ನಾಭರಣ ತೆಗೆದುಕೊಂಡ ಬಗ್ಗೆ ಒಪ್ಪಿಕೊಂಡಿದ್ದರು.
ಮತ್ತಷ್ಟು ವಿಚಾರಣೆ ನಡೆಸಿದಾಗ ಯುವಕನ ಮೇಲೆ ಸುಳ್ಳು ಕೇಸು ದಾಖಲಿಸಿ ಸಮಾಜ ಕಲ್ಯಾಣ ಇಲಾಖೆಯಿಂದ 2.50 ಲಕ್ಷ ರೂ. ಪರಿಹಾರ ಪಡೆದುಕೊಂಡ ಸತ್ಯಾಂಶವೂ ಬಹಿರಂಗವಾಗಿತ್ತು. ಅದರಂತೆ ನ್ಯಾಯಾಧೀಶರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕಿ ಮತ್ತವರ ಕುಟುಂಬಕ್ಕೆ ನೀಡಿದ್ದ 2.50 ಲಕ್ಷ ರೂ. ಪರಿಹಾರ ಧನ ವಾಪಸ್ ಪಡೆಯು ವಂತೆ ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.