ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಲು ಕೆಐಎಡಿಬಿಗೆ ಸಂಸದ ಚೌಟ ಸೂಚನೆ
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ ಯೋಜನೆ ಅನುಷ್ಠಾನ ವಿಳಂಬ

ಮಂಗಳೂರು: ನಗರ ಹೊರವಲಯದ ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಯೋಜನೆಗೆ ಭೂಸ್ವಾಧೀನ ತಕರಾರಿನಿಂದಾಗಿ ಹಿನ್ನಡೆಯಾಗಿರುವ ಹಿನ್ನಲೆಯಲ್ಲಿ ದ.ಕ. ಸಂಸದ ಬ್ರಿಜೇಶ್ ಚೌಟ ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಇಂಜಿನಿಯರ್‌ಗೆ ಬರೆದ ಪತ್ರದಲ್ಲಿ ಭೂವಿವಾದಿತ 9.33 ಎಕರೆ ಜಾಗ ಕೈಬಿಟ್ಟು ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಶೀಘ್ರ ಅದರ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಗಂಜಿಮಠದಲ್ಲಿ 104 ಎಕರೆಯಲ್ಲಿ ಕರಾವಳಿಯ ಮಹಾತ್ವಾಕಾಂಕ್ಷೆಯ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಯೋಜನೆಗೆ ಅನಂತ ಕುಮಾರ್ ಕೇಂದ್ರ ರಾಸಾಯನಿಕ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. 2022ರಲ್ಲಿ ಯೋಜನೆ ಜಾರಿಗೆ ಅನುಮೋದನೆ ದೊರೆತಿದ್ದರೂ 9.33 ಎಕರೆ ಭೂಸ್ವಾಧೀನ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಸಾಕಷ್ಟು ವಿಳಂಬವಾಗಿತ್ತು. ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ನಡೆಯದಿರುವುದು ಕಂಡುಬಂದಿದೆ ಎಂದು ಬ್ರಿಜೇಶ್ ಚೌಟ ಅಸಮಾಧಾನ ವ್ಯಕ್ತಪಡಿಸಿದ್ದರು.
9.33 ಎಕರೆ ಭೂಸ್ವಾಧೀನ ವಿವಾದದಿಂದಾಗಿ ಯೋಜನೆ ಕಾರ್ಯರೂಪಕ್ಕೆ ತರಲು ಹಿನ್ನಡೆಯಾಗಿರುವುದಾಗಿ ಕೆಐಎಡಿಬಿ ಅಧಿಕಾರಿಗಳು ತಿಳಿಸಿದ ಮೇರೆಗೆ ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ತಯಾರಿಸಿ ಉಳಿದ ಜಾಗ ಅಭಿವೃದ್ಧಿಸಬೇಕು. ಆ ಮೂಲಕ ಯೋಜನೆ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಚೌಟ ತಿಳಿಸಿದ್ದಾರೆ.
ಆರಂಭದಲ್ಲಿ ಹಲವು ಪ್ಲಾಸ್ಟಿಕ್ ಕಂಪೆನಿಗಳು ಉದ್ದೇಶಿತ ಪ್ಲಾಸ್ಟಿಕ್ ಪಾರ್ಕ್‌ನಲ್ಲಿ ಘಟಕ ಸ್ಥಾಪಿಸುವುದಕ್ಕೆ ಮುಂದಾಗಿದ್ದವು. ಆದರೆ ಪಾರ್ಕ್ ನಿರ್ಮಾಣ ಕಾರ್ಯವಿಳಂಬವಾದ ಕಾರಣ ಉದ್ಯಮಿಗಳು ಬೇರೆಡೆ ಆಸಕ್ತಿ ತೋರಿಸಿದ್ದಾರೆ. ಇದು ಸಹಜವಾಗಿ ಕರಾವಳಿಯ ಇತರೆ ಯೋಜನೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಆದಷ್ಟು ಬೇಗ ಈ ಯೋಜನೆಗೆ ಎದುರಾಗಿರುವ ಅಡತಡೆ ದೂರ ಮಾಡಿ ಮಂಗಳೂರಿನ ಪ್ಲಾಸ್ಟಿಕ್ ಪಾರ್ಕ್‌ನಲ್ಲಿ ಬಂಡವಾಳ ಹೂಡುವುದಕ್ಕೆ ಉದ್ದಿಮೆದಾರರನ್ನು ಆಕರ್ಷಿಸಲು ತಾವು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಮುಖ್ಯ ಇಂಜಿನಿಯರ್‌ಗೆ ಬರೆದಿರುವ ಪತ್ರದಲ್ಲಿ ಚೌಟ ಸೂಚಿಸಿದ್ದಾರೆ.