ಶಿಕ್ಷಕರ ಸೇವೆ ಬಹಳ ಪವಿತ್ರವಾದದ್ದು: ಕೆ ಎಂ ಕೆ ಮಂಜನಾಡಿ

ಮಂಗಳೂರು: ಶಿಕ್ಷಕರ ಸೇವೆ ಬಹಳ ಪವಿತ್ರವಾದದ್ದು. ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳ ಬೇಕಾದರೆ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಅದೆಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಗುರುತಿಸಿಕೊಂಡ ಶಿಕ್ಷಕಿ ಭಗಿನಿ ಲಿಲ್ಲಿ ಡಿ ಸೋಜರ ಸೇವೆ ಶ್ಲಾಘನೀಯ ಎಂದು ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣದ ಅಧ್ಯಕ್ಷ ಕೆ ಎಂ ಕೆ ಮಂಜನಾಡಿ ಅಭಿಪ್ರಾಯ ಪಟ್ಟಿದ್ದಾರೆ.
ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯ ವತಿಯಿಂದ ರೋಸ ಮಿಸ್ತಿಕ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳದಲ್ಲಿ ನಡೆದ ವಿದಾಯ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿನಂದನಾ ಭಾಷಣವನ್ನು ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ನೆರವೇರಿಸಿ ಇವತ್ತಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ದೊಂದಿಗೆ ಮಾನವೀಯ ಶಿಕ್ಷಣ ಬಹಳ ಮುಖ್ಯ. ವಿದ್ಯಾರ್ಥಿಗಳು ಎಷ್ಟೇ ಕಲಿತರೂ ತಂದೆ ತಾಯಿಗೆ ಗುರುಗಳಿಗೆ ಗೌರವ ನೀಡುವ ಸಂಸ್ಕಾರವನ್ನು ಕಲಿಯದೇ ಹೋದರೇ ಮಾನವೀಯ ಸಂಬಂಧಗಳೇ ಮಾಯ ವಾಗುವ ಸ್ಥಿತಿ ನಿರ್ಮಾಣವಾಗುತ್ತದೆ.ಈ ದೃಷ್ಟಿಯಲ್ಲಿ ರೋಸ ಮಿಸ್ತಿಕ ಶಾಲೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ, ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಅಭಿನಂದನೀಯ ಮಾತ್ರವಲ್ಲದೇ ಇದಕ್ಕೆ ಪೂರಕವಾಗಿ ಸಿಸ್ಟರ್ ಲಿಲ್ಲಿ ಡಿಸೋಜ ಅವರ ಸೇವೆ ಮೆಚ್ಚುವಂತಹದು ಎಂದರು.
ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವಿಕ್ಷಣಾಧಿ ಕಾರಿ ಲಿಲ್ಲಿ ಪಾಯ್ಸ್ , ಸಂಘದ ಉಪಾಧ್ಯಕ್ಷ ಗುರುಮೂರ್ತಿ ಪಿ, ಕೋಶಾಧಿಕಾರಿ ಪ್ರೇಮನಾಥ ಶೆಟ್ಟಿ ಎಡಪದವು, ಶಾಲಾ ಸಂಚಾಲಕರು ರೋಸ್ ಲಿಟ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವೀಣಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶೀಲಾವತಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲೂಸಿ ಮರಿಸ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕರುಗಳಾದ ಸಿಲ್ವಿಯ, ಐಡಾ ಪಿರೇರಾ, ಸಬೀನಾ ಕ್ರಸ್ತಾ, ಅಂಜಲಿನ್, ಆಶ್ರಿತ, ಮರ್ಸಿನ್, ಪ್ರವೀಣ್ ಕುಟಿನೊ ಮುಂತಾದವರು ಸಹಕರಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಲಾನ್ಸಿ ಸಿಕ್ವೆರ ಸ್ವಾಗತಿಸಿ, ನಿರೂಪಿಸಿದರು.
ಸಂಘದ ಉಪಾಧ್ಯಕ್ಷರು ಗುರುಮೂರ್ತಿ ಪಿ ವಂದಿಸಿದರು.







