ಮಂಗಳೂರು: ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

ಗುರುವಪ್ಪ ಬಾಳೆಪುಣಿ
ಮಂಗಳೂರು: ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಅಪರಾಹ್ನ ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅವರು ಪತ್ನಿ, ಪುತ್ರ ಹಾಗು ಬಂಧು ಬಳಗವನ್ನು ಅಗಲಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ, ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು.
ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ ಕೀರ್ತಿ ಇವರದ್ದು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಬಾಳೆಪುಣಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ 7 ಗಂಟೆಯೊಳಗೆ ಮುದುಂಗಾರುಕಟ್ಟೆಯಲ್ಲಿ ಅವರ ಅಣ್ಣನ ಅಂತ್ಯಸಂಸ್ಕಾರ ಆದ ಜಾಗದಲ್ಲೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂತಾಪ
ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಮಗೆಲ್ಲರಿಗೂ ಮಾರ್ಗದರ್ಶಿಗಳಾಗಿದ್ದವರು. ಬಾಳೆಪುಣಿಯವರ ನಿಧನಕ್ಕೆ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.







