ಶಿಕ್ಷಣವೇ ಬದುಕಿನಲ್ಲಿ ಗಳಿಸುವ ದೊಡ್ಡ ಆಸ್ತಿ: ಐವನ್ ಡಿಸೋಜ
ಜಮೀಯ್ಯತುಲ್ ಫಲಾಹ್ ವತಿಯಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉನ್ನತೀಕರಣ ಕಾರ್ಯಾಗಾರ

ಮಂಗಳೂರು: ವಿದ್ಯಾರ್ಥಿ ಜೀವನದಲ್ಲಿ ಸಂಪಾದಿಸುವ ಜ್ಞಾನ ಅದು ನಮ್ಮ ಬದುಕಿನಲ್ಲಿ ಸಂಪಾದಿಸುವ ದೊಡ್ಡ ಆಸ್ತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹೇಳಿದ್ದಾರೆ.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಲ್ಲೆ ಇದರ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ. ಜಿಲ್ಲಾ ಪಂಚಾಯತ್ ಇದರ ಸಹಕಾರದೊಂದಿಗೆ ಮಂಗಳವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉನ್ನತೀಕರಣ ಕಾರ್ಯಾಗಾರ ಪ್ರೇರಣಾ-2025 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು. ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಕಾರ್ಯ ಇದಾಗಿದೆ ಎಂದು ಹೇಳಿದರು.
ಕನಸು ಕಂಡರೆ ಏನಾಗಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟವರು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ. ಅವರಿಗೆ ವಿದ್ಯಾಭ್ಯಾಸವೇ ಬದುಕಿನ ದಾರಿಯಾಗಿತ್ತು ಎಂದರು.
ದ.ಕ. ಮತ್ತು ಉಡುಪಿ ಜಿಲ್ಲೆ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ, ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹಾ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್, ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಹಾಜಿ ಮುಹಮ್ಮದ್ ಬಪ್ಪಳಿಗೆ , ಗ್ರೀನ್ ವ್ಯೆ ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುನ್‌ನಾಸಿರ್ ಕೆ.ಕೆ , ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಇವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕ ಯಾಕೂಬ್ ನಡ, ಅಂತರ್‌ರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್, ಸ.ಪ.ಪೂ ಕಾಲೇಜು ಸಜೀಪಮೂಡದ ಉಪನ್ಯಾಸಕ ವೆಂಕಟರಮಣ ಆಚಾರ್ಯ ಕಾರ್ಯಾಗಾರ ನಡೆಸಿಕೊಟ್ಟರು.
ಮಂಗಳೂರು ಪ್ರೆಸ್ ಕ್ಲಬ್‌ನ ಗೌರವ ಸನ್ಮಾನಕ್ಕೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತ ಮುಹಮ್ಮದ್ ಆರಿಫ್ ಪಡುಬಿದ್ರೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕಿನ 76 ಶಾಲೆಗಳ ಹಾಜರಾಗುವ ಸುಮಾರು 650ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ಉಪಾಧ್ಯಕ್ಷ ಫರ್ವೇಝ್ ಅಲಿ ಉಪಸ್ಥಿತರಿದ್ದರು.
ಯು.ಎಚ್.ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೆ.ಎಂ. ಸಿದ್ದೀಕ್ ವಂದಿಸಿದರು.