ವಿನಾಯಕ ಬಾಳಿಗಾ ಮನೆಗೆ ಸಮಾನ ಮನಸ್ಕರ ನಿಯೋಗ ಭೇಟಿ

ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಮನೆಗೆ ಸಮಾನ ಮನಸ್ಕರ ನಿಯೋಗವು ಭೇಟಿ ನೀಡಿ ಧೈರ್ಯ ತುಂಬಿದೆ.
ಬಾಳಿಗಾ ಕೊಲೆ ಪ್ರಕರಣದ ವಿಚಾರಣೆ ತ್ವರಿತವಾಗಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮಧ್ಯೆ ಪ್ರಕರಣದ ಸರಕಾರಿ ವಿಶೇಷ ಅಭಿಯೋಜಕರಾಗಿ ನೇಮಕವಾಗಿದ್ದ ಖ್ಯಾತ ನ್ಯಾಯವಾದಿ ಬಾಲನ್ ಅವರನ್ನು ಪ್ರಕರಣದಲ್ಲಿ ವಾದ ಮಾಡದಂತೆ ಆರೋಪಿಗಳು ಉಚ್ಚ ನ್ಯಾಯಾಲಯದಲ್ಲಿ ತಡೆ ತಂದಿದ್ದರು. ಬಳಿಕ ಬಾಳಿಗಾ ಸಹೋದರಿಯರು ಬಾಲನ್ ಬದಲಿಗೆ ಹೊಸ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಿ ಎಂದು ರಾಜ್ಯ ಗೃಹ ಸಚಿವರಿಗೆ/ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಹೊಸ ವಿಶೇಷ ಅಭಿಯೋಜಕರ ನೇಮಕಾತಿಗೆ ಮನವಿ ಸಲ್ಲಿಸಿ ಐದು ತಿಂಗಳು ಕಳೆದರೂ ಅನುಮೋದನೆ ದೊರಕದೆ ಕಾರಣ ಬಾಳಿಗಾ ಕುಟುಂಬವು ಆತಂಕಕ್ಕೆ ಸಿಲುಕಿದೆ. ಹಲವು ಪ್ರಯತ್ನಗಳ ಹೊರತಾಗಿಯೂ ಗೃಹ ಖಾತೆಯಲ್ಲಿ ಫೈಲ್ ಕ್ಲಿಯರ್ ಆಗುತ್ತಿಲ್ಲ ಎಂಬುದು ಬಾಳಿಗಾ ಸೋದರಿಯರು ಅಳಲುತೋಡಿಕೊಂಡಿದ್ದಾರೆ.
ಬಾಳಿಗಾ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿದ್ದ ಸಂಘಟನೆಗಳ ಮುಖಂಡರು ಬಾಳಿಗಾರ ಮನೆಗೆ ಭೇಟಿ ನೀಡಿ ಚರ್ಚಿಸಿದರು. ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಸಿಪಿಎಂ ಮುಖಂಡ ಯೋಗೀಶ್ ಜಪ್ಪಿನಮೊಗರು, ಸಾಮಾಜಿಕ ಕಾರ್ಯಕರ್ತರಾದ ಸಮರ್ಥ್ ಭಟ್, ರಾಜೇಶ್ ದೇವಾಡಿಗ ನಿಯೋಗದಲ್ಲಿದ್ದರು.





