ಒಡಿಯೂರು ತುಳು ಸಮ್ಮೇಳನ ಅಧ್ಯಕ್ಷರಾಗಿ ಭಾಸ್ಕರ ರೈ ಕುಕುವಳ್ಳಿ

ಭಾಸ್ಕರ ರೈ ಕುಕುವಳ್ಳಿ
ಮಂಗಳೂರು: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ನಲ್ಲಿ ಜರಗುವ ೨೫ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ, ಸಾಹಿತಿ,ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ.
ಫೆ.೬ರಂದು ಗುರುದೇವಾನಂದ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ’ತುಳು ಬಾಸೆ ಸಂಸ್ಕೃತಿದ ಜಾಗೃತಿಗಾದ್’ ಎಂಬ ಧ್ಯೇಯ ವಾಕ್ಯದೊಂದಿಗೆ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಸಮ್ಮೇಳನ ನಡೆಯಲಿದೆ.
ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬಾಲ್ಯೊಟ್ಟು ಗುತ್ತು ಮನೆತನದಲ್ಲಿ ಜನಿಸಿ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಮತ್ತು ಪುತ್ತೂರಿನ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ, ಮಂಗಳೂರಿನ ಸರಕಾರಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿಎಡ್ ಹಾಗೂ ಮೈಸೂರು ಮಾನಸಗಂಗೋತ್ರಿಯಲ್ಲಿ ಎಂಎ ಎಂಎಡ್ ಪದವಿಗಳನ್ನು ಗಳಿಸಿದರು. ಭಾರತೀಯ ಅಂಚೆ ಇಲಾಖೆಯಲ್ಲಿ ೧೪ ವರ್ಷ ಸೇವೆ ಸಲ್ಲಿಸಿದ ಬಳಿಕ ಶಿಕ್ಷಣ ಇಲಾಖೆ ಸೇರಿ ಚೇಳಾಯರು ಮತ್ತು ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತರಾದರು.
ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಪ್ರಮುಖ ಅರ್ಥಧಾರಿ, ಹವ್ಯಾಸಿ ವೇಷಧಾರಿ ಮತ್ತು ಪುರಾಣ ಪ್ರವಚನಕಾರರಾಗಿರುವ ಅವರು ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರು. ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಬಾನುಲಿ ಪಠ್ಯಗಳನ್ನು ರಚಿಸಿದ್ದಾರೆ. ಧ್ವನಿಸುರುಳಿ ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ ಮತ್ತು ಗೀತೆಗಳನ್ನು ಬರೆದಿದ್ದಾರೆ. ಪ್ರಪ್ರಥಮ ತುಳುವಾರ್ತಾ ವಾಹಿನಿ ನಮ್ಮ ಕುಡ್ಲ, ಸಹಾಯ ಟಿವಿ,ವಿ೪, ಡೈಜಿ ವರ್ಲ್ಡ್, ರೇಡಿಯೋ ಸಾರಂಗ್, ಕ್ಯಾಡ್ ಮೀಡಿಯಾಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದೇಶ ವಿದೇಶಗಳ ವಿವಿಧ ಸಮ್ಮೇಳನ, ಸಾಹಿತ್ಯ ಗೋಷ್ಠಿ ಮತ್ತು ಯಕ್ಷಗಾನಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ, ಯಕ್ಷಾಂಗಣ ಮಂಗಳೂರು, ಕರ್ನಾಟಕ ಯಕ್ಷಭಾರತಿ ಪುತ್ತೂರು ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ.
ಅಂತಾರಾಷ್ಟ್ರೀಯ ಆರ್ಯಭಟ, ಜಿಲ್ಲಾ ರಾಜ್ಯೋತ್ಸವ, ಕಾರಂತ ಸದ್ಭಾವನ, ಸೌರಭ, ಸಾಧನ, ನೂಪುರ, ವಿದ್ಯಾರತ್ನ, ಯುಎಇ ಬಂಟ ವಿಭೂಷಣ, ಪೆರ್ಮೆದ ತುಳುವೆ, ಶೇಣಿ ಶತಮಾನೋತ್ಸವ, ಮುಂಬೈ ಯಕ್ಷರಕ್ಷಾ, ಕುದುರೆಮುಖ ಕನ್ನಡ ಸಂಘದ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ಸಂದಿವೆ.