ಕೆಲವೇ ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲಿದೆ: ಪ್ರೊ.ಎಂ.ಎಸ್.ಮೂಡಿತ್ತಾಯ
ಪಿ.ಎ. ಶಿಕ್ಷಣ ಸಂಸ್ಥೆಯಲ್ಲಿ ಪದವಿ ದಿನಾಚರಣೆ

ಕೊಣಾಜೆ: ಭಾರತವು ಯುವ ರಾಷ್ಟ್ರವಾಗಿದ್ದು, ಮುಂದಿನ ಹದಿನೈದು ಅಥವಾ ಇಪ್ಪತ್ತು ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಸೇರುತ್ತದೆ. ಇಂದಿನ ಆಧುನಿಕ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಮ್ಮಲ್ಲಿರುವ ಕೌಶಲ ಮತ್ತು ಚಾಣ ಕ್ಯತೆ, ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಲು ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಅಭಿಪ್ರಾಯಪಟ್ಟರು.
ಅವರು ಶನಿವಾರ ನಡುಪದವು ಪಿ.ಎ. ಎಜ್ಯುಕೇಷನಲ್ ಟ್ರಸ್ಟ್ ಅಧೀನದ ಪಿ.ಎ. ಕಾಲೇಜ್ ಆಫ್ ಫಾರ್ಮಸಿ, ಸೆಂಟರ್ ಫಾರ್ ಮೆನೇಜ್ ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್ ಹಾಗೂ ಫಿಸಿಯೋಥೆರಪಿ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಲಿಕೆ ಎಂಬುದು ಪದವಿಗಾಗಿ ಮಾತ್ರವಲ್ಲ. ಜೀವನದುದ್ದಕ್ಕೂ ಹೊಸತನ್ನು ಕಲಿಯುವ ಮೂಲಕ ಜ್ಞಾನ ವೃದ್ಧಿಸುವ ಕಾರ್ಯ ವಾಗಬೇಕು. ಹೆತ್ತವರ ಸಹಕಾರದಿಂದ ಈ ಹಂತಕ್ಕೆ ಬಂದಿದ್ದು ಅವರ ಪರಿಶ್ರಮ, ನಿರೀಕ್ಷೆಗಳನ್ನು ಎಂದಿಗೂ ಹುಸಿಯಾಗಿ ಸಬೇಡಿ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತ ವಿಭಾಗದ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮೂರು ವಿಷಯಗಳಲ್ಲಿ ಪದವಿ ಪಡೆದವರು ದೇಶದ ಭವಿಷ್ಯ ಬದಲಾಯಿಸುವ ಅವಕಾಶ ಹೊಂದಿದ್ದಾರೆ. ಯಾವುದೇ ಕ್ಷೇತ್ರದಲ್ಲಿದ್ದರೂ ಮಾನವೀಯ ಮೌಲ್ಯಗಳು ನಮ್ಮಲ್ಲಿದ್ದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಪಿ.ಎ.ಎಜ್ಯುಕೇಶನ್ ಟ್ರಸ್ಟ್ ಇಂದು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತಿದೆ ಎಂದರು.
ಬೆಂಗಳೂರು ಐಟಿಸಿ ಇನ್ಫೋಟೆಕ್ ಉಪಾಧ್ಯಕ್ಷ ಅನಿಲ್ ಕುಮಾರ್ ಪ್ರಭಾಕರನ್, ಮುಂಬೈ ನಾನಾವತಿ ಆಸ್ಪತ್ರೆಯ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟಿ ಸೆಂಟರ್ ಮುಖ್ಯಸ್ಥ ಡಾ.ಅಲೀ ಇರಾನಿ, ಸಂಸ್ಥೆಯ ಟ್ರಸ್ಟಿ ಮುಹಮ್ಮದ್ ಅಮೀನ್ ಇಬ್ರಾಹಿಂ, ಹಣಕಾಸು ವ್ಯವಹಾರಗಳ ನಿರ್ದೇಶಕ ಅಹ್ಮದ್ ಕುಟ್ಟಿ, ಪಿಎಸಿಟಿ ಎಜಿಎಂ ಸರ್ಫುದ್ದೀನ್, ಪಿಎಸಿಇ ಪ್ರಾಂಶುಪಾಲ ಡಾ.ರಮೀಸ್ ಎಂ.ಕೆ., ಉಪಪ್ರಾಶುಪಾಲೆ ಡಾ.ಶರ್ಮಿಳಾ ಕುಮಾರಿ, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್, ಪಿಎಇಟಿ ಡೀನ್ ಡಾ.ಸಯ್ಯದ್ ಅಮೀನ್ ಅಹ್ಮದ್, ಡಾ.ಸಲೀಂ ಅಮೀನ್, ಮಹಮ್ಮದ್ ಮುಬೀನ್ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪಿಎಸಿಎ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್ ಸ್ವಾಗತಿಸಿದರು. ಪಿಎಐಪಿ ಪ್ರಾಂಶುಪಾಲ ಡಾ.ಸಜೀಶ್ ರಘುನಾಥನ್ ವಂದಿಸಿದರು. ಉಪನ್ಯಾಸಕರಾದ ಪ್ರೊ.ಶಮಾ ಅಬ್ಬಾಸ್, ಪ್ರೊ. ನಜಾಫತ್ ಹಾಗೂ ಪ್ರೊ.ಅರ್ಚ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಎಂಬಿಎ , ಬಿ ಮತ್ತು ಡಿ.ಫಾರ್ಮಾ ಹಾಗೂ ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.