ಮಂಗಳೂರು| ಅಪಘಾತ ಪ್ರಕರಣ: ಟ್ಯಾಂಕರ್ ಚಾಲಕನಿಗೆ ಜೈಲು ಶಿಕ್ಷೆ, ದಂಡ

ಮಂಗಳೂರು, ಫೆ.2: ನಗರದ ಪದವು-ನಂತೂರು ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಬುಲೆಟ್ ಟ್ಯಾಂಕರ್ ಚಾಲಕನಿಗೆ ಜೆಎಂಎಫ್‌ಸಿ 3ನೇ ನ್ಯಾಯಾಲಯ 6 ತಿಂಗಳು ಜೈಲು ಮತ್ತು 7,500 ರೂ. ದಂಡ ವಿಧಿಸಿದೆ.
ತಮಿಳುನಾಡಿನ ಕರಂಬಕುಡಿ ತಾಲೂಕಿನ ಕನಕ್ಕನಕಾಡು ಪುದುಕೊಟ್ಟೈ ನಿವಾಸಿ ಅಯ್ಯಪ್ಪನ್ (32) ಶಿಕ್ಷೆಗೊಳಗಾದ ಆರೋಪಿ ಚಾಲಕ. 2020ರ ಫೆ.13ರಂದು ಸಂಜೆ 4:40ಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಪದವು ಕಡೆಯಿಂದ ನಂತೂರು ಕಡೆಗೆ 21ರ ಹರೆಯದ ಕಾರ್ತಿಕ್ ತನ್ನ ಬೈಕ್‌ನಲ್ಲಿ ಸಾಗುತ್ತಿದ್ದಾಗ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಬುಲೆಟ್ ಟ್ಯಾಂಕರನ್ನು ಅದರ ಚಾಲಕ ಅಯ್ಯಪ್ಪನ್ ದುಡುಕುತನ ಮತ್ತು ನಿರ್ಲಕ್ಷ್ಯದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಬೈಕ್‌ಗೆ ಢಿಕ್ಕಿ ಹೊಡೆಸಿದ್ದ. ಪರಿಣಾಮ ಕಾರ್ತಿಕ್ ರಸ್ತೆಗೆ ಬಿದ್ದಿದ್ದು, ಟ್ಯಾಂಕರ್‌ನ ಎಡಭಾಗದ ಚಕ್ರ ಕಾರ್ತಿಕ್ ಮಲ್ಯನ ತಲೆಯ ಮೇಲೆ ಹರಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದ.
ಪ್ರಕರಣದ ತನಿಖೆ ನಡೆಸಿದ ಕದ್ರಿ ಸಂಚಾರ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಂಜೀವ ಎ.ಪಿ. ಮತ್ತು ತಸ್ಲಿಂ ಆರೀಫ್ ಜೆ. ತನಿಖಾ ಸಹಾಯಕರಾಗಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಇ.ಎಸ್. ಆರೋಪಿಗೆ ಆರು ತಿಂಗಳು ಜೈಲು ಮತ್ತು 7,500 ರೂ. ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ನೇತ್ರಾವತಿ ಮತ್ತು ಗೀತಾ ರೈ ಸಾಕ್ಷಿಗಳನ್ನು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.