ಸುರತ್ಕಲ್: ರೈಲ್ವೆ ಮೇಲ್ಸೇತುವೆ ಉದ್ಘಾಟನೆ

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆಯ 78 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಲಾದ ಸುರತ್ಕಲ್ - ಎಂಆರ್ ಪಿಎಲ್ ರೈಲ್ವೆ ಮೇಲ್ಸೇತುವೆಯನ್ನು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರೈಲ್ವೆ ಇಲಾಖೆಯ ಆಧೀನದಲ್ಲಿರುವ ಸೇತುವೆಯಾದರೂ ಜನರ ಹಿತದೃಷ್ಠಿಯಿಂದ ಎನ್‍ಒಸಿ ಪಡೆದು ಕಾಂಕ್ರಿಟ್ ಮಾಡಲಾಗಿದೆ. ರೈಲ್ವೆ ಮೇಲ್ಸೇತುವೆಯನ್ನು ಚತುಷ್ಪಥ ಮಾಡುವ ಅಗತ್ಯವಿದ್ದು, ಜಾಗ ಗುರುತಿಸಿ ಹೆಚ್ಚುವರಿ ಕಾಂಕ್ರಿಟ್ ಮಾಡಲಾಗಿದೆ. ಸಂಸದ ಬೃಜೇಶ್ ಚೌಟ ಹಾಗೂ ರೈಲ್ವೆ ಸಚಿವ ಸೋಮಣ್ಣ ಅವರಲ್ಲಿ ಪ್ರಸ್ತಾವನೆ ಇರಿಸಲಾಗಿದ್ದು, ಭವಿಷ್ಯದಲ್ಲಿ ಅನುದಾನ ದೊರಕುವ ಭರವಸೆಯಿದೆ ಎಂದ ಅವರು, ಹಂಪ್ಸ್ ಆಳವಡಿಸಿ ವೇಗ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ ಎಂದರು.
ರಸ್ತೆಯನ್ನು ಅವಧಿಗಿಂತ ಮುಂಚಿತವಾಗಿ ತ್ವರಿತವಾಗಿ ನಿರ್ಮಿಸಲು ಸಹಕರಿಸಿದ ಪಾಲಿಕೆ ಇಂಜಿನಿಯರ್ ಕಾರ್ತಿಕ್ ಶೆಟ್ಟಿ, ಗುತ್ತಿಗೆದಾರರಾದ ಸುಧಾಕರ ಪೂಂಜಾ, ಮನಪಾ ಸದಸ್ಯರು ಹಾಗೂ ಸುಮಾರು ಒಂದು ತಿಂಗಳ ಕಾಲ ಸಂಚಾರದಲ್ಲಿ ಸಹಕರಿಸಿದ ವಾಹನ ಚಾಲಕರು, ಸ್ಥಳೀಯರನ್ನು ಶಾಸಕರು ಇದೇ ಸಂದರ್ಭ ಶ್ಲಾಘಿಸಿದರು.
ಈ ಸಂದರ್ಭ ಮೇಯರ್ ಮನೋಜ್ ಕುಮಾರ್, ಉಪಮೇಯರ್ ಬಾನುಮತಿ, ಸ್ಥಳೀಯ ಮನಪಾ ಸದಸ್ಯರಾದ ಸರೀತಾ ಶಶಿಧರ್, ವರುಣ್ ಚೌಟ, ಲೋಕೇಶ್ ಬೊಳ್ಳಾಜೆ, ನಯನ ಆರ್. ಕೋಟ್ಯಾನ್, ಶ್ವೇತಾ ಎ., ಶೋಭಾ ರಾಜೇಶ್, ವೇದಾ ವತಿ, ಲಕ್ಷ್ಮೀಶೇಖರ್ ದೇವಾಡಿಗ, ಮನಪಾದ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಸುರತ್ಕಲ್ ಭಾಗದ ಜನರ ಬಹುಬೇಡಿಕೆಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ವಿಶೇಷ ಅನುದಾನದಿಂದ ದುರಸ್ತಿ ಕಾಮಗಾರಿ ನಡೆಸಲಾದ ಸುರತ್ಕಲ್ - ಎಂಆರ್‌ಪಿಎಲ್ ರಸ್ತೆಯ ರೈಲ್ವೇ ಮೇಲ್ಸೇತುವೆ ಉದ್ಘಾಟನೆಗೆ ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕರು ಹಾಗೂ ವಾರ್ಡ್ ಸದಸ್ಯ ಅನಿಲ್ ಕುಮಾರ್ ಮತ್ತು 5ನೇ ವಾರ್ಡ್ ಸದಸ್ಯೆಯಾಗಿರುವ ಎಸ್‌ಡಿಪಿಐಯ ಸಂಶಾದ್ ಅಬೂಬಕರ್ ಅವರಿಗೆ ಆಮಂತ್ರಣ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮಂಗಳೂರು ಮಹಾನಗರ ಪಾಲಿಕೆಯ ವಿಶೇಷ ನಿಧಿಯಿಂದ ಕಾಮಗಾರಿ ನಡೆಸಲಾಗಿದೆ. ಹೀಗಿರುವಾಗ ಮನಪಾ ವಿರೋಧ ಪಕ್ಷದ ನಾಯಕನಿಗೆ ಹಾಗೂ ಎಲ್ಲಾ ಸ್ಥಳೀಯ ಪ್ರತಿನಿಧಿಗಳನ್ನು ಉದ್ಘಾಟನೆಗೆ ಆಹ್ವಾನಿಸುವುದು ಮನಪಾ ಅಧಿಕಾರಿಗಳ ಕರ್ತವ್ಯ. ಆದರೆ ಅಧಿಕಾರಿಗಳು ಸರಕಾರಿ ಶಿಷ್ಟಾಚಾರವನ್ನು ಗಾಳಿಗೆ ತೂರಿ ಬಿಜೆಪಿಯ ಪ್ರಕೋಷ್ಠಗಳ ಪದಾಧಿಕಾರಿಗಳು, ಬಿಜೆಪಿ ಮಂಡಲ ಸಮಿತಿಯ ಪದಾಧಿಕಾರಿಗಳನ್ನು ಕರೆಸಿ ಬಿಜೆಪಿಯ ಕಾರ್ಯಕ್ರಮದಂತೆ ರೈಲ್ವೇ ಮೇಲ್ಸೇತುವೆ ಉದ್ಘಾಟನೆ ಮಾಡಿರುವುದು ಅಕ್ಷಮ್ಯ. ಮನಪಾ ಅಧಿಕಾರಿಗಳು ಶಾಸಕ ಭರತ್ ಶೆಟ್ಟಿ ಮತ್ತು ಮನಪಾ ಬಿಜೆಪಿ ಸದಸ್ಯರ ಕೈಗೊಂಬೆಗಳಂತಾಗಿದ್ದಾರೆ ಎಂದು ಮನಪಾ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸುರತ್ಕಲ್ - ಎಂಆರ್‌ಪಿಎಲ್ ರಸ್ತೆಯ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಮಹಾನಗರ ಪಾಲಿಕೆ ಅನುದಾನವಷ್ಟೇ ನೀಡಿದೆ. ಅದರ ಉದ್ಘಾಟನೆ ಕಾರ್ಯಕ್ರಮವನ್ನು ಮನಪಾ ಆಯೋಜಿಸಿಲ್ಲ. ಹಾಗಾಗಿ ಸರಕಾರಿ ಶಿಷ್ಟಾಚಾರ ಉಲ್ಲಂಘಟನೆ ಯಾಗುವುದಿಲ್ಲ. ಮನಪಾ ಆಯುಕ್ತರು ಸೂಚನೆ ನೀಡಿದರಷ್ಟೇ ಮನಪಾ ಕಾರ್ಯಕ್ರಮ ಆಯೋಜಿಸುತ್ತದೆ".
-ಕಾರ್ತಿಕ್ ಶೆಟ್ಟಿ, ಎಡಬ್ಲ್ಯೂಡಿ ಅಧಿಕಾರಿ ಸುರತ್ಕಲ್ ವಲಯ
