ಕುಳಾಯಿ ಜೆಟ್ಟಿಗೆ ಎನ್‌ಐಒ ತಾಂತ್ರಿಕ ತಜ್ಞರ ಸಮಿತಿ ಭೇಟಿ; ಪರಿಶೀಲನೆ

ಸುರತ್ಕಲ್ : ಮೀನುಗಾರರ ಬಹು ನಿರೀಕ್ಷೆಯ ಕುಳಾಯಿ ಜೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಎನ್‌ಐಒ ಗೋವಾ, ಎನ್‌ಐಒಟಿ ಚೆನ್ನೈ ಮತ್ತು ಎನ್‌ಸಿಸಿಆರ್ ಚೆನ್ನೈ ಒಳಗೊಂಡ ಮೂರು ಸದಸ್ಯರ ತಾಂತ್ರಿಕ ತಜ್ಞರ ಸಮಿತಿ ತನ್ನ ವರದಿ ಯನ್ನು ಎನ್‌ಎಂಪಿಎಗೆ ರವಾನಿಸಿದೆ.
2023ರ ಮಾರ್ಚ್ ಗೆ ಆರಂಭಗೊಂಡಿದ್ದ ಕುಳಾಯಿ ಜೆಟ್ಟಿ ಕಾಮಗಾರಿಯ ದಕ್ಷಿಣ ಬ್ರೇಕ್‌ವಾಟರ್ ಮತ್ತು ಉತ್ತರ ಬ್ರೇಕ್ ವಾಟರ್ ನಿರ್ಮಾಣ ಹಂತದಲ್ಲಿದೆ. ದಕ್ಷಿಣ ಬ್ರೇಕ್‌ವಾಟರ್‌ನ ಉದ್ದಗಳನ್ನು ಹೆಚ್ಚಿಸಬೇಕು. ಸಮುದ್ರದ ಅಲೆಗಳ ಹೊಡೆತ ದಿಂದ ಮೀನುಗಾರಿಕಾ ಬೋಟ್ ಗಳು ಬಂದರು ಪ್ರವೇಶಿಸಲು ಮತ್ತು ಹೊರಹೋಗಲು ಸಾಧ್ಯವಾಗದ ರೀತಿಯಲ್ಲಿ ಜೆಟ್ಟಿ ನಿರ್ಮಿಸಲಾಗಿದೆ. ಕಳೆದ ಮಳೆಗಾಲದ ಸಂದರ್ಭ ನಿರ್ಮಿಸಲಾಗಿದ್ದ ಜೆಟ್ಟಿಯ ಗೋಡೆಗಳು ಕುಸಿದಿದ್ದು, ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಮೀನುಗಾರರು ಹಲವು ರೀತಿಯ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಹಿನ್ನೆಲೆ ಯಲ್ಲಿ ಮೀನುಗಾರಿಕಾ ಸಚಿವ ಮಾಂಕಾಳವೈದ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿ ಸ್ಥಗಿತ ಗೊಳಿಸಿ ತಜ್ಞರ ತಂಡದಿಂದ ಪರಿಶೀಲನೆ ನಡೆಸಿದ ಬಳಿಕ ಕಾಮಗಾರಿ ಮುಂದುವರಿಸುವ ಕುರಿತು ಚಿಂತಿಸುವುದಾಗಿ ಹೇಳಿದ್ದರು.
ಅದರಂತೆ ಎನ್‌ಐಒ ಗೋವಾ, ಎನ್‌ಐಒಟಿ ಚೆನ್ನೈ ಮತ್ತು ಎನ್‌ಸಿಸಿಆರ್ ಚೆನ್ನೈ ಒಳಗೊಂಡ ಮೂರು ಸದಸ್ಯರ ತಾಂತ್ರಿಕ ತಜ್ಞರ ತಂಡ 2025ರ ಜ.6ರಂದು ಜೆಟ್ಟಿಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸದ್ಯ ತಂಡ ಪರಿಶೀಲನೆಯ ವರಯನ್ನು ಎಂಎಂಪಿಎಗೆ ರವಾನಿಸಿದ್ದು, ಮೀನುಗಾರ ಸಮುದಾಯಕ್ಕೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲು ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರಿಸಬೇಕೆಂದು ಎನ್ ಎಂಪಿಎಗೆ ಸೂಚಿಸಿದೆ.
ತಜ್ಞರ ಸಮಿತಿಯ ವರದಿ ಬಂದಿರುವ ಹಿನ್ನೆಲೆಯಲ್ಲಿ ಸಧ್ಯದಲ್ಲೇ ಮೀನುಗಾರಿಕಾ ಸಚಿವರು, ಶಾಸಕರ, ಸಂಸದರು, ಎನ್‌ಎಂಪಿಎ ಹಾಗೂ ಮೀನುಗಾರ ಮುಖಂಡರ ಸಭೆ ನಡೆಸಿ ಮುಂದಿನ ಕ್ರಮ ವಹಿಸಲಿದ್ದಾರೆ ಎಂದು ಎನ್‌ಎಂಪಿಎಯ ಪ್ರಕಟಣೆ ತಿಳಿಸಿದೆ.