ಮಂಗಳೂರು: ಸ್ವಿಗ್ವಿ ಇನ್‌ಸ್ಟಾ ಮಾರ್ಟ್ ವಿರುದ್ಧ ಫುಡ್ ಡೆಲಿವರಿ ನೌಕರರ ಪ್ರತಿಭಟನೆ

ಮಂಗಳೂರು: ಬೇಡಿಕೆಗಳನ್ನು ಈಡೇರಿಸದ ಸ್ವಿಗ್ವಿ ಇನ್‌ಸ್ಟಾ ಮಾರ್ಟ್ ಕಂಪೆನಿಯ ವಿರುದ್ಧ ಫುಡ್ ಡೆಲಿವರಿ ನೌಕರರು ಮಂಗಳ ವಾರ ನಗರದ ಕುಂಟಿಕಾನದಲ್ಲಿರುವ ಕಂಪೆನಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 6 ವರ್ಷದಿಂದ ನಾವು ಆನ್‌ಲೈನ್ ಮೂಲಕ ಪಡೆದ ಆರ್ಡರ್‌ಗೆ ತಕ್ಕಂತೆ ಫುಡ್ ಡೆಲಿವರಿ ಮಾಡುತ್ತಿದ್ದೇವೆ. ಆದರೆ ನಮಗೆ ಸೂಕ್ತ ಕಮಿಷನ್ ನೀಡದೆ ಸತಾಯಿಸಲಾಗುತ್ತಿದೆ. ಕೆಲಸದ ಒತ್ತಡವೂ ಇದೆ. ಕಮಿಷನ್ ಹೆಚ್ಚಿಸುವಂತೆ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಇಲ್ಲ. ಕಂಪೆನಿಯ ಸ್ಥಳೀಯ ಮ್ಯಾನೇಜರ್‌ಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿದರು.
ಆನ್‌ಲೈನ್ ಆರ್ಡರ್‌ಗಳನ್ನು ಪೂರೈಸುವ ನಿಟ್ಟಿನಲ್ಲಿ ನಾವು ಆಹಾರ ತೆಗೆದುಕೊಂಡು ಅಪಾರ್ಟ್‌ಮೆಂಟ್‌ಗಳಿಗೆ ತೆರಳಿದಾಗ ನಮ್ಮನ್ನು ಅಲ್ಲಿ ವಿಚಿತ್ರವಾಗಿ ಕಾಣಲಾಗುತ್ತದೆ. ಸರಕು ಸಾಗಣೆಯ ಲಿಫ್ಟ್‌ಗಳನ್ನು ಬಳಸುವಂತೆ ಸೂಚಿಸಿ ಅವಮಾನಿಸಲಾ ಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಾವು ಕಳೆದ ಮೂರು ದಿನದಿಂದ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿಲ್ಲ. ಬುಧವಾರ ರಾತ್ರಿವರೆಗೂ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಾಯುತ್ತೇವೆ. ಆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಡೆಲಿವರಿ ಪ್ರತಿನಿಧಿಗಳು ಎಚ್ಚರಿಸಿದರು.