ದೇರಳಕಟ್ಟೆ: ಶಿಕ್ಷಕ ಮಂಜುನಾಥ್ ಭಟ್‌ರಿಗೆ ಬೀಳ್ಕೊಡುಗೆ

ದೇರಳಕಟ್ಟೆ: ಇಲ್ಲಿನ ಅಸೈ ಮದಕದಲ್ಲಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಕಳೆದ 29 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿರುವ ಶಿಕ್ಷಕ ಮಂಜುನಾಥ್ ಭಟ್‌ರಿಗೆ ಬೀಳ್ಕೊಡುಗೆ ಸಮಾರಂಭವು ಸಂಸ್ಥೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪೂರ್ಣಿಮಾ, “ಒಂದೇ ಸಂಸ್ಥೆಯಲ್ಲಿ 29 ವರ್ಷ ಸರ್ಕಾರಿ ಕೆಲಸ ಮಾಡುವುದು ಎಂದರೆ ಅದೊಂದು ಸರಳ ವಿಷಯವಲ್ಲ. ಅದನ್ನು ಗಣಿತ ಶಿಕ್ಷಕ ಮಂಜುನಾಥ್ ಭಟ್ ಸಾಧಿಸಿ, ತೋರಿಸಿದ್ದಾರೆ. ಅವರ ನಿವೃತ್ತಿ ಜೀವನವು ಸಂತಸದಿಂದ ಕೂಡಲಿ ಎಂದು ಹಾರೈಸಿದರು.
ಸಹ ಶಿಕ್ಷಕ ಮುಹಮ್ಮದ್ ಹನೀಫ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಮುಹಮ್ಮದ್ ಅನ್ವರ್ ಮಾತನಾಡಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಗಣಿತ ಶಿಕ್ಷಕ ಮಂಜುನಾಥ್ ಭಟ್ , ನನ್ನ ಹಾಗೂ ವಿದ್ಯಾರ್ಥಿಗಳ ನಡುವಿನ ಸ್ನೇಹ. ಅದೊಂದು ರೀತಿಯಲ್ಲಿ ಅಂಟಿನಂತಿದೆ. ಈ ಸ್ನೇಹವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾಚಾರ್ಯರಾದ ಉಮರಬ್ಬ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅಶೋಕ್, ಧಾರ್ಮಿಕ ಗುರುಗಳಾದ ಉಮರುಲ್ ಫಾರೂಕ್, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ಮಹಾಬಲೇಶ್ವರ ನಾಯಕ್, ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಫಾರೂಕ್, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಅಸೈ, ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶಕೀಲ್ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕಿ ಹಸೀನಾ ಧನ್ಯವಾದ ಸಲ್ಲಿಸಿದರು.