ಸುರತ್ಕಲ್: ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಕಾರು; ದಂಪತಿಗೆ ಗಾಯ

ಸುರತ್ಕಲ್: ನಿಯಂತ್ರಣ ಕಳೆದುಕೊಂಡ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ 5 ಅಡಿ ಆಳದ ಹೊಂಡಕ್ಕೆ ಬಿದ್ದು ದಂಪತಿ ಗಾಯಗೊಂಡಿರುವ ಘಟನೆ ಜೋಕಟ್ಟೆಯ ಕಳವಾರು ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಸುರತ್ಕಲ್ ಕಾನ ಕಾಪ್ರಿಗುಡ್ಡ ನಿವಾಸಿ ರವಿ ಮತ್ತು ಅವರ ಪತ್ನಿ ಗಾಯಗೊಂಡವರು ಎಂದು ತಿಳಿದು ಬಂದಿದೆ.
ಅಪಘಾತದಿಂದ ದಂಪತಿಗೆ ಗಾಯಗಳಾಗಿದ್ದು, ಅವರನ್ನು ಕಾನದ ಆಸ್ಪತ್ರೆಗೆ ರವಾನಿಸಲಾಗಿದೆ.
ರವಿ ಅವರು ಪತ್ನಿಯೊಂದಿಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಜೋಕಟ್ಟೆ ಕಳವಾರು ತಲುಪಿದಾಗ ಕಾರಿನ ಬ್ರೇಕ್ ಫೇಲ್ ಆಗಿದೆ. ಕಾರನ್ನು ನಿಯಂತ್ರಣಕ್ಕೆ ತರಲೆಂದು ಯತ್ನಿಸಿದಾಗ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಒಂದು ವಿದ್ಯುತ್ ಕಂಬ ನೆಲಕ್ಕೆ ಉರುಳಿದ್ದು, ಹೈಟೆನ್ಷನ್ ವಯರ್ ರಸ್ತೆಯಲ್ಲಿ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರು ಜೋಕಟ್ಟೆ ಬಜ್ಪೆ ರಸ್ತೆಯಿಂದ ಎಸ್ ಇಆರ್ ಝೆಡ್ ರಸ್ತೆಗೆ ಉರುಳಿದೆ ಎಂದು ತಿಳಿದು ಬಂದಿದೆ.
Next Story





