ಕುಪ್ಪೆಪದವು: ನೂತನ ಉಪ ಅಂಚೆ ಕಚೇರಿ ಉದ್ಘಾಟನೆ

ಮಂಗಳೂರು: ವೃದ್ಧರಿಗೆ, ಅಶಕ್ತರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಹಳ್ಳಿಯಿಂದ ದಿಲ್ಲಿಯವರೆಗೆ ಇಲಾಖೆಯ ಎಲ್ಲಾ ಸವಲತ್ತುಗಳ ಬಗ್ಗೆ ಮಾರ್ಗದರ್ಶನದೊಂದಿಗೆ ಸೇವೆಯನ್ನು ಮಾಡುವ ಅಂಚೆ ಇಲಾಖೆಯು ಜನರ ಮನೆ-ಮನಗಳನ್ನು ತಲುಪಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಹೇಳಿದರು.
ನಗರ ಹೊರವಲಯದ ಕುಪ್ಪೆಪದವಿನಲ್ಲಿ ನೂತನ ಉಪ ಅಂಚೆಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರ, ಪಾರ್ಸೆಲ್, ಮನಿಯಾರ್ಡರ್ ಜೊತೆಗೆ ಉಳಿತಾಯ ಖಾತೆಗಳು, ಜೀವ ವಿಮೆ, ನಾಗರಿಕ ಕೇಂದ್ರಿತ ಸೇವೆಗಳನ್ನು ನೀಡುತ್ತಿದ್ದು ಉಳಿತಾಯ ಖಾತೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಡಿ ದೇಶ ದಾದ್ಯಂತ ಒಂದು ದೇಶ ಒಂದು ಐಊಖಇ ಕೋಡ್ ಮೂಲಕ ಸರಳ ವ್ಯವಹಾರ ಸಾಧ್ಯಗೊಳಿಸಿದೆ ಎಂದು ಎಸ್. ರಾಜೇಂದ್ರ ಕುಮಾರ್ ನುಡಿದರು.
ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ 1947ರಲ್ಲಿ ಶಾಖಾ ಅಂಚೆ ಕಚೇರಿಯಾಗಿ ಆರಂಭಗೊಂಡ ಕುಪ್ಪೆಪದವು ಅಂಚೆ ಕಚೇರಿ ಈಗ ಇಲಾಖಾ ಉಪ ಅಂಚೆ ಕಚೇರಿಯಾಗಿ ಉನ್ನತೀಕರಣಗೊಂಡಿದೆ ಎಂದರು.
ಕುಪ್ಪೆಪದವು ಗ್ರಾಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಉದ್ಯಮಿ ಮುಸ್ತಫಾ, ಹಿರಿಯ ಅಂಚೆ ಪಾಲಕ ಶ್ರೀನಾಥ್ ಬಿ. ಉಪಸ್ಥಿತರಿದ್ದರು. ಪ್ರತಿಭಾ ಶೇಟ್ ಮತ್ತು ಅಶ್ವಿನಿ ನಾಡಗೀತೆ ಹಾಡಿದರು. ಉಪ ಅಂಚೆ ಅಧೀಕ್ಷಕ ದಿನೇಶ್ ಪಿ. ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕ ಸಿ.ಪಿ.ಹರೀಶ್ ವಂದಿಸಿದರು. ವಿಭಾಗಿಯ ಕಚೇರಿ ಸಹಾಯಕ ವಿಲ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.