ಬಜಾಲ್ ಜಲ್ಲಿಗುಡ್ಡೆ: ರಸ್ತೆ ದುರಸ್ತಿಗೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ

ಮಂಗಳೂರು, ಫೆ.10: ಜಲ್ಲಿಗುಡ್ಡೆಯ ಮುಖ್ಯರಸ್ತೆ ಅಗಲೀಕರಣ, ಕಾಂಕ್ರಟೀಕರಣ, ಒಳಚರಂಡಿ, ಜಯನಗರದಿಂದ ಪಕ್ಕಲಡ್ಕ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಡಿವೈಎಫ್‌ಐ ಬಜಾಲ್ ಜಲ್ಲಿಗುಡ್ಡೆ ಘಟಕದ ವತಿಯಿಂದ ಸೋಮವಾರ ಬಜಾಲ್ ಜಲ್ಲಿಗುಡ್ಡೆ ಕ್ರಾಸ್ ಬಳಿ ಪ್ರತಿಭಟನೆ ನಡೆಯಿತು.
ಅದಕ್ಕೂ ಮುನ್ನ ಜಲ್ಲಿಗುಡ್ಡೆ ಜಯನಗರದಿಂದ ಜಲ್ಲಿಗುಡ್ಡೆ ಕ್ರಾಸ್‌ವರೆಗೆ ಮೆರವಣೆಗೆ ನಡೆಯಿತು. ಬಳಿಕ ಪಾಲಿಕೆಯ ಹಿರಿಯ ಕಾರ್ಯಪಾಲಕ ಅಭಿಯಂತರ ನರೇಶ್ ಶೆಣೈ ಮನವಿ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ನಗರ ಪಾಲಿಕೆಯ ಸಾವಿರಾರೂ ಕೋಟಿ ರೂಪಾಯಿ ಅನುದಾನಗಳಲ್ಲಿ ಬಜಾಲ್ ವಾರ್ಡಿನ ಅಭಿವೃದ್ಧಿಗೆ ಬೀಡಿಗಾಸೂ ಮೀಸಲಿಟ್ಟಿಲ್ಲ. ಶಾಸಕ ವೇದವ್ಯಾಸ ಕಾಮತ್ ಈ ಭಾಗದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ 13 ಕಡೆಗಳಲ್ಲಿ ನಡೆಸಿದ ಕಾಮಗಾರಿಗೆ ಚಾಲನೆ ನೀಡಿ ವರ್ಷ ಕಳೆದಿದೆ. ಆದರೂ ಕೆಲಸ ಕೆಲಸ ಪ್ರಾರಂಭಗೊಳ್ಳಲಿಲ್ಲ ಎಂದು ಆಪಾದಿಸಿದರು.
ಕಾರ್ಮಿಕ ಸಂಘಟನೆಯ ನಾಯಕ ಸುನೀಲ್ ಕುಮಾರ್ ಬಜಾಲ್, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ ಮಾತನಾಡಿದರು. ಡಿವೈಎಫ್‌ಐ ನಗರ ಅಧ್ಯಕ್ಷ ಜಗದೀಶ್ ಬಜಾಲ್, ನಾಯಕರಾದ ರಿಜ್ವಾನ್ ಹರೇಕಳ, ಜಯಪ್ರಕಾಶ್ ಜಲ್ಲಿಗುಡ್ಡೆ, ಗೀತಾ ಜಲ್ಲಿಗುಡ್ಡೆ, ರೋಹಿಣಿ ಜಲ್ಲಿಗುಡ್ಡೆ, ಮೋಹನ್ ಜಲ್ಲಿಗುಡ್ಡೆ, ಅನ್ಸಾರ್ ಫೈಸಲ್‌ನಗರ, ಪ್ರಕಾಶ್ ಶೆಟ್ಟಿ, ವರಪ್ರಸಾದ್, ದೀಕ್ಷಿತ್ ಭಂಡಾರಿ, ಅಶೋಕ್ ಸಾಲ್ಯಾನ್, ಕಮಲಾಕ್ಷ ಬಜಾಲ್, ಜ್ಯೋತಿಶ್, ಲೀನಾ ಟೀಚರ್, ಪಾಯಸ್, ಸೀತಾರಾಮ್, ವಿಜಯ ಕುಮಾರ್ ಮೈರ, ಕೇಶವ ಭಂಡಾರಿ, ಜಯಪ್ರಕಾಶ್, ಜೋಬಿ ಪಾಲ್ಗೊಂಡಿದ್ದರು.
ಡಿವೈಎಫ್‌ಐ ಬಜಾಲ್ ಘಟಕದ ಕಾರ್ಯದರ್ಶಿ ದೀರಾಜ್ ಬಜಾಲ್ ಸ್ವಾಗತಿಸಿದರು. ದೀಪಕ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.







