ಗಂಜಿಮಠ ʼಪ್ಲಾಸ್ಟಿಕ್ ಪಾರ್ಕ್’ ಕೈಗಾರಿಕಾ ವಲಯ ಸ್ಥಾಪನೆಗೆ ಒತ್ತಾಯಿಸಿ ಸಿಪಿಎಂ ಧರಣಿ

ಮಂಗಳೂರು, ಫೆ.10: ಗಂಜಿಮಠ ಱಪ್ಲಾಸ್ಟಿಕ್ ಪಾರ್ಕ್’ ಕೈಗಾರಿಕಾ ವಲಯ ಕಾರ್ಯರೂಪಕ್ಕೆ ತರಲು, ಗಂಜಿಮಠ ಇಪಿಐಪಿ ಕೈಗಾರಿಕಾ ವಲಯದ ಖಾಲಿ ಬಿದ್ದಿರುವ ಜಮೀನಿನಲ್ಲಿ ಕೈಗಾರಿಕೆಗಳನ್ನು ತಕ್ಷಣ ಆರಂಭಿಸಲು ಆಗ್ರಹಿಸಿ ಸಿಪಿಎಂ ಗುರುಪುರ ವಲಯ ಸಮಿತಿಯ ವತಿಯಿಂದ ಸೋಮವಾರ ಗಂಜಿಮಠ ಕೈಗಾರಿಕಾ ವಲಯದ ಮುಂದೆ ಧರಣಿ ನಡೆಯಿತು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ ಎಂಆರ್‌ಪಿಎಲ್‌ನ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಗಂಜಿಮಠ ಪ್ರದೇಶದಲ್ಲಿ ಇಪಿಐಪಿ ಕೈಗಾರಿಕಾ ವಲಯದ ಸಮೀಪ ನೂರು ಎಕರೆ ಭೂಮಿ ಸ್ವಾಧೀನ ಪಡಿಸಿ, ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸುವುದಾಗಿ ಏಳು ವರ್ಷದ ಹಿಂದೆ ಕೇಂದ್ರ ಸರಕಾರವು ಘೋಷಿಸಿತ್ತು. ಆದರೆ ಇಂದಿಗೂ ಆ ಯೋಜನೆ ಜಾರಿಯಾಗದೆ ಕುಂಟುತ್ತಿದೆ ಎಂದರು.
ಇಪಿಐಪಿ ಕೈಗಾರಿಕಾ ವಲಯದ ಶೇ.60ರಷ್ಟು ಜಮೀನು ಉದ್ಯಮಗಳು ಸ್ಥಾಪನೆಯಾಗದೆ ಪಾಳು ಬಿದ್ದಿದೆ. ಖರೀದಿ ಮಾಡಿದ ಮೂರು ವರ್ಷದ ಒಳಗಡೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬ ನಿಯಮಗಳನ್ನು ಧನಿಕರು ಗಾಳಿಗೆ ತೂರುತ್ತಿದ್ದಾರೆ. ಕೈಗಾರಿಕಾ ವಲಯಗಳಲ್ಲಿ ಸೈಟುಗಳನ್ನು ಪಡೆದುಕೊಂಡು ರಿಯಲ್ ಎಸ್ಟೇಟ್ ಉದ್ದೇಶದಿಂದ ಪಾಳು ಬಿಟ್ಟಿದ್ದಾರೆ. ಹೀಗೆ ಕೈಗಾರಿಕಾ ವಲಯಗಳಲ್ಲಿ ಜಮೀನುಗಳನ್ನು ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಲಾಗದ ಧನಿಕರ ಹೆಸರುಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವರಿಂದ ಜಮೀನುಗಳನ್ನು ವಾಪಸ್ ಪಡೆದು ಕೈಗಾರಿಕಾ ಸ್ಥಾಪನೆಗಳಲ್ಲಿ ಆಸಕ್ತಿ ಇರುವವರಿಗೆ ಜಮೀನುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಸದಾಶಿವದಾಸ್, ಮನೋಜ್ ವಾಮಂಜೂರು, ವಸಂತಿ ಕುಪ್ಪೆಪದವು, ಅಶೋಕ್ ತಾರಿಗುಡ್ಡೆ, ನೋಣಯ ಗೌಡ ಮಿಜಾರ್, ವಾರಿಜ ಕುಪ್ಪೆಪದವು, ರಾಜೇಶ್ ನಾಯಕ್, ಆನಂದ ಇರುವೈಲು, ಬಾಬು ಸಾಲ್ಯಾನ್, ಸಾಮಾಜಿಕ ಹೋರಾಟಗಾರ ಬಾವ ಪದರಂಗಿ ಉಪಸ್ಥಿತರಿದ್ದರು.