ಫಾ.ಪ್ರಶಾಂತ್ ಮಾಡ್ತಾರಿಗೆ ದಾಯ್ಜಿ ದುಬಾಯ್ ಸಾಹಿತ್ಯ ಪುರಸ್ಕಾರ ಪ್ರದಾನ

ಮಂಗಳೂರು, ಫೆ. 12: ಖ್ಯಾತ ಕನ್ನಡ ಕೊಂಕಣಿ ಬರಹಗಾರ, ಭಾಷಾ ಸಂಶೋಧಕ ವಂ. ಪ್ರಶಾಂತ್ ಮಾಡ್ತರಿಗೆ 2024 ನೇ ಸಾಲಿನ ಪ್ರತಿಷ್ಠಿತ ದಾಯ್ಜಿ ದುಬಾಯ್ ಸಾಹಿತ್ಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಮಂಗಳೂರಿನ ಬೆಂದೂರ್ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆದ ದಾಯ್ಜಿ ದುಬಾಯ್ ಬೆಳ್ಳಿಹಬ್ಬದ ಆಚರಣೆ ಸಂದರ್ಭದಲ್ಲಿ ಅನಿವಾಸಿ ಉದ್ಯಮಿ ಮೈಕಲ್ ಡಿ ಸೋಜ, ಜೋಸೆಫ್ ಮಥಾಯಸ್ ಹಾಗೂ ಜೆಪ್ಪು ಸೆಮಿನರಿ ರೆಕ್ಟರ್ ಫಾ.ರೊನಾಲ್ಡ್ ಸೆರಾವೊ ಮಾಡ್ತಾರಿಗೆ ಫಲ ಪುಷ್ಪ ಹಾಗೂ ಸ್ಮರಣಿಕೆಯೊಂದಿಗೆ ಶಾಲು ಹೊದಿಸಿ 75,000 ರೂ ಪ್ರಶಸ್ತಿ ಮೊತ್ತವನ್ನು ಹಸ್ತಾಂತರಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಮಾಡ್ತಾ ಅವರು ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುವ ನಮ್ಮ ಕರಾವಳಿಗರು ಇಲ್ಲಿನ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡುತ್ತಿದ್ದಾರೆ. ಯುಎಇಯಲ್ಲಿ ವಾಸವಾಗಿರುವ ಕರಾವಳಿಯ ಕೊಂಕಣಿ ಬರಹಗಾರರ ಸಂಘಟನೆ ದಾಯ್ಜಿ ದುಬಾಯ್ ತಾಯ್ನಾಡಿನಲ್ಲಿ ಕೊಂಕಣಿ ಸಾಹಿತ್ಯ ಹಾಗೂ ಸಾಹಿತಿಗಳಿಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಎಂದು ನುಡಿದರು
ಸಂಘಟನೆಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ , ಮೆಲ್ವಿನ್ ರೊಡ್ರಿಗಸ್, ಸ್ಟೀಫನ್ ಮಸ್ಕರೇನ್ಹಸ್, ಸಂಘಟನೆಯ ಮಂಗಳೂರು ಘಟಕ ಅಧ್ಯಕ್ಷ ಪ್ರವೀಣ್ ತಾವ್ರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖ್ಯಾತ ಕೊಂಕಣಿ ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಸಂಘಟನೆಯ ಸಂಸ್ಥಾಪಕರನ್ನು ಸನ್ಮಾನಿಸಿದರು. ಸಂಚಾಲಕ ಡಯಾನ್ ಡಿ ಸೋಜ ವಂದಿಸಿದರು.







