ದೇರಳಕಟ್ಟೆ: ಗ್ರಾಮ ಆಡಳಿತ ಅಧಿಕಾರಿಗಳ ಮೌನ ಮುಷ್ಕರ ಮೂರನೇ ದಿನಕ್ಕೆ

ದೇರಳಕಟ್ಟೆ: ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆಶ್ರಯದಲ್ಲಿ ಮೂಲಭೂತ ಸೌಕರ್ಯ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ಆರಂಭಿಸಿದ ಅನಿರ್ದಿಷ್ಟಾವಧಿ ಎರಡನೇ ಹಂತದ ಮೌನ ಮುಷ್ಕರ ಮೂರನೇ ದಿನವಾದ ಬುಧವಾರ ಕೂಡಾ ನಾಟೆಕಲ್ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಮುಂದುವರಿದಿದೆ.
ಬೇಡಿಕೆ ಈಡೇರುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ. ಗ್ರಾಮಸ್ಥರು ಪ್ರತಿಭಟನಾ ನಿರತ ಸ್ಥಳಕ್ಕೆ ಬಂದು ಕೆಲಸ ಮಾಡಿ ಕೊಡುವಂತೆ ವಿನಂತಿಸಿದರೂ ಕೆಲಸ ಮಾಡಿ ಕೊಡುವ ಪ್ರಶ್ನೆ ಇಲ್ಲ ಎಂದು ಬಾಳೆಪುಣಿ ಇರಾ ಗ್ರಾಮದ ಗ್ರಾಮಕರಣಿಕ ಲಿಂಗಪ್ಪ ತಿಳಿಸಿದರು.
ಗ್ರಾಮಕರಣಿಕರ ಮೌನ ಮುಷ್ಕರದಿಂದ ತಾಲೂಕು ವ್ಯಾಪ್ತಿಯ ಗ್ರಾಮಸ್ಥರು ಗ್ರಾಮಕರಣಿಕರ ಸೇವೆ ಸಿಗದೇ ತೊಂದರೆ ಗೊಳಗಾದರು. ಆದಾಯ ಪ್ರಮಾಣ ಪತ್ರ ಸಹಿತ ಅಗತ್ಯ ದಾಖಲೆಗಳಿಗೆ ಗ್ರಾಮಕರಣಿಕರ ಸಹಿ ಪಡೆದು ಕೊಳ್ಳಲು ಗ್ರಾಮಕರಣಿಕರು ಮುಷ್ಕರ ನಡೆಸುತ್ತಿರುವ ನಾಟೆಕಲ್ ನಲ್ಲಿ ರುವ ತಾಲೂಕು ಕಚೇರಿಗೆ ಬುಧವಾರ ಕೂಡಾ ಕೆಲವು ಗ್ರಾಮಗಳ ಗ್ರಾಮಸ್ಥರು ಆಗಮಿಸಿದ್ದರು. ಆದರೆ ಮುಷ್ಕರ ನಿರತ ಗ್ರಾಮಕರಣಿಕರು ಗ್ರಾಮಸ್ಥರ ಕೆಲಸ ಮಾಡಿಕೊಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕರಣಿಕರ ಸಹಿ ಪಡೆಯಲು ಬಂದ ಗ್ರಾಮಸ್ಥರು ಬರಿಗೈಯಲ್ಲಿ ವಾಪಸ್ ಆದರು.
ಬೇಡಿಕೆ ಈಡೇರುವವರೆಗೆ ಮುಷ್ಕರ: ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು.ಅಲ್ಲಿಯವರೆಗೆ ಮುಷ್ಕರ ಮಾಡುತ್ತೇವೆ ಎಂದು ಗ್ರಾಮಕರಣಿಕ ಸುರೇಶ್ ತಿಳಿಸಿದರು. ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮಕರಣಿಕರು ಉಪಸ್ಥಿತರಿದ್ದರು.
"ಗ್ರಾಮಕರಣಿಕರ ಮೌನ ಮುಷ್ಕರದಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕಂದಾಯ ಸಚಿವರು, ಕಂದಾಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ಮಾಡಿದ್ದೇನೆ. ಜನ ಸಾಮಾನ್ಯರಿಗೆ ತೊಂದರೆ, ಅಡಚಣೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಏನು ಮಾಡುತ್ತಾರೆ ಎಂದು ಕಾದು ನೋಡಬೇಕು"
-ಯು.ಟಿ.ಖಾದರ್ , ಸ್ಪೀಕರ್







