ನಿವೃತ್ತ ಶಿಕ್ಷಕ, ಕೃಷಿ ತಜ್ಞ, ರತ್ನಮಾನಸದ ಪಾಲಕ ಕಾಶ್ಮೀರ್ ಮಿನೇಜಸ್ ನಿಧನ

ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಉಜಿರೆಯಲ್ಲಿ ನಡೆಸಲ್ಪಡುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೀವನಶಿಕ್ಷಣ ನೀಡುವ ``ರತ್ನಮಾನಸ’’ ವಿದ್ಯಾರ್ಥಿನಿಲಯದ ನಿವೃತ್ತ ವಾರ್ಡನ್ ಕಾಶ್ಮಿರ್ ಮಿನೆಜಸ್ (80) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ಮಂಗಳೂರಿನಲ್ಲಿ ನಿಧನರಾದರು.
ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಶಾಲಾ ಶಿಕ್ಷಣದ ಜೊತೆಗೆ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಅಡುಗೆತಯಾರಿ ಮೊದಲಾದ ವಿಷಯಗಳಲ್ಲಿ ವಿಶೇಷ ತರಬೇತಿ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಜೀವನಶಿಕ್ಷಣ ನೀಡುವ ``ರತ್ನಮಾನಸ’’ ವಿದ್ಯಾರ್ಥಿನಿಲಯವನ್ನು 1972 ರಲ್ಲಿ ಪ್ರಾರಂಭಿಸಿದಾಗ ಕಾಶ್ಮಿರ್ ಮಿನೆಜಸ್ ವಿದ್ಯಾರ್ಥಿನಿಲಯದ ವಾರ್ಡನ್ ಆಗಿ ಸೇರಿದರು. ಬಳಿಕ ಅವರು ಸ್ಥಳೀಯ ಎಸ್.ಡಿ.ಎಂ. ಸೆಕೆಂಡರಿ ಶಾಲೆಯಲ್ಲಿ ಪದವೀಧರ ಸಹಾಯಕ ಶಿಕ್ಷಕರಾಗಿ ನೇಮಕಗೊಂಡರು.
ಸಿಂಡಿಕೇಟ್ ಬ್ಯಾಂಕಿನ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಶಾಲೆಯಲ್ಲಿ ಭಾವಿ ಕೃಷಿಕರ ಸಂಘ ಪ್ರಾರಂಭಿಸಿ ಶಾಲೆ ಹಾಗೂ ರತ್ನಮಾನಸದಲ್ಲಿ ಕೃಷಿ ಹಾಗೂ ತೋಟಗಾರಿಕೆಯಲ್ಲಿ ವಿಶೇಷ ತರಬೇತಿ, ಮಾರ್ಗದರ್ಶನ ನೀಡಿದರು.
ಬಳಿಕ ಮುಖ್ಯೋಪಾಧ್ಯಾಯರಾಗಿ ಬಡ್ತಿಗೊಂಡು ಧರ್ಮಸ್ಥಳದ ಪ್ರೌಢಶಾಲೆಗೆ ವರ್ಗಾವಣೆಗೊಂಡು ನಿವೃತ್ತರಾದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಕೃಷಿ ತಜ್ಞರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.
ವೀರೇಂದ್ರ ಹೆಗ್ಗಡೆ ಸಂತಾಪ
ಕಾಶ್ಮಿರ್ ಮಿನೆಜಸ್ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.
ಪ್ರೌಢ ಶಾಲಾ ಶಿಕ್ಷಕರಾಗಿ, ರತ್ನಮಾನಸ ವಿದ್ಯಾರ್ಥಿನಿಲಯದ ವಾರ್ಡನ್ ಆಗಿ ಉತ್ತಮ ಸೇವೆ ನೀಡಿರುವ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೃಷಿಯಲ್ಲಿ ತಜ್ಞರಾಗಿ ಎಲ್ಲಾ ಕಡೆ ಓಡಾಡಿ ಸ್ವ-ಸಹಾಯ ಸಂಘಗಳನ್ನು ರಚಿಸಿ, ಸ್ವಾವಲಂಬಿ ಜೀವನ ನಡೆಸುವ ಬಗ್ಯೆ ವಿಶೇಷ ಮಾರ್ಗದರ್ಶನ, ತರಬೇತಿ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಅಪಾರ ಗೌರವವಿದೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.