ಋಣಮುಕ್ತ ಹೋರಾಟ ಸಮಿತಿ ಬೆಂಗ್ರೆ ಕಸಬ ವತಿಯಿಂದ ಪ್ರತಿಭಟನೆ
ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಕಿರುಕುಳ ಆರೋಪ

ಪಣಂಬೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಯವರು ಸಾಲ ಪಡೆದ ಸಂತ್ರಸ್ತ ಕುಟುಂಬಗಳಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಸರಕಾರ ಸಾಲ ಸಂತ್ರಸ್ತ ಕುಟುಂಬಗಳ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಋಣಮುಕ್ತ ಹೋರಾಟ ಸಮಿತಿ ಬೆಂಗ್ರೆ ಕಸಬ ವತಿಯಿಂದ ಗುರುವಾರ ಧರ್ಮಸ್ಥಳ ಸಂಘದ ಯೋಜನೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮೈಕ್ರೋ ಫೈನಾನ್ಸ್ ಗಳಿಂದ ರಾಜ್ಯದಲ್ಲಿ ತುಂಬಾ ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಬೆಂಗ್ರೆ ಪ್ರದೇಶದಲ್ಲಿ ಸುಮಾರು 5 ಜನರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ವರದಿಯಾಗಿದೆ. ಎಲ್ಲಿಯವರೆಗೆ ಕಟ್ಟಿದ ಹಣಕ್ಕೆ ಬ್ಯಾಂಕ್ ಪಾಸ್ ಬುಕ್ ನೀಡುವುದಿಲ್ಲವೋ ಅಲ್ಲಿಯವರೆಗೆ ಸಾಲವನ್ನು ಮರುಪಾವತಿ ಮಾಡುವುದುಲ್ಲ. ಆರ್ ಬಿ ಐ ಕಾನೂನುಗಳನ್ನು ಉಲ್ಲಂಘಿಸಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ 60 ವರ್ಷ ಮೇಲ್ಪಟ್ಟವರಿಗೂ ಇವರು ಸಾಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಣ್ಣ ಪುಟ್ಟ ವ್ಯಾಪಾರ ಮಾಡಲು ಸಾಲ ತಗೊಂಡು ವ್ಯಾಪಾರದಿಂದ ತೊಂದರೆ ಆಗಿ ಸಮಯಕ್ಕೆ ಸರಿಯಾಗಿ ಸಾಲದ ಕಂತು ಕಟ್ಟಲು ಸಾಧ್ಯವಾಗದೆ ಇದ್ದಾಗ ಅಂತವರಿಗೆ ಧರ್ಮಸ್ಥಳ ಸ್ವ ಸಹಾಯ ಸಂಘದ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಲಲಿತ್ ಮೋದಿ, ವಿಜಯ್ ಮಲ್ಯ ರಂತವರು ದೇಶದ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಸಾಲ ಮಾಡಿ ದೇಶಬಿಟ್ಟು ಹೋದಾಗ ಸರಕಾರಕ್ಕೆ ಅವರ ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತೆ, ಆದರೆ ಹೊಟ್ಟೆಪಾಡಿಗೆ ಸಣ್ಣ ಪುಟ್ಟ ಸಾಲ ಮಾಡಿದ ನಮ್ಮಂತವರ ಸಾಲ ಮನ್ನಾ ಮಾಡಲು ಯಾಕೆ ಸಾಧ್ಯವಿಲ್ಲ ಎಂದು ಅವರು ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಯವರ ದಬ್ಬಾಳಿಕೆ, ದೌರ್ಜನ್ಯ ಇಲ್ಲಿಗೆ ಕೊನೆಯಗಬೇಕು. ಸರಕಾರ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಸ್ವ ಸಹಾಯ ಸಂಘದಲ್ಲಿ ಸಾಲ ಪಡೆಯಲು ಬಂದಂತ ನಾಗರಿಕರಿಗೆ ಸುರಕ್ಷಾ ಎಂಬ ವಿಮೆ ಯೋಜನೆಯನ್ನು ಕಡ್ಡಾಯವಾಗಿ ಮಾಡಿಸು ತ್ತಿದ್ದು, ನಮ್ಮನು ಲೂಟಿ ಮಾಡುತ್ತಾ ರಕ್ತಹಿರುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ, ಈ ಋಣಮುಕ್ತಾ ಹೋರಾಟ ಸಮಿತಿ ಬೆಂಗ್ರೆ ಕಸಬಾ ಹಾಗೂ ಡಿವೈಎಫ್ಐ ದ.ಕ.ಜಿಲ್ಲೆ ಈ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದು ಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಋಣಮುಕ್ತ ಹೋರಾಟ ಸಮಿತಿ ಜಿಲ್ಲಾ ಸದಸ್ಯರಾದ ಯೋಗಿತಾ ಸುವರ್ಣ, ಡಿವೈಎಫ್‌ಐ ಜಿಲ್ಲಾ ಮುಖಂಡ ತೈಯೂಬ್ ಬೆಂಗ್ರೆ ಮಾತನಾಡಿದರು. ಈ ಸಂದರ್ಭ ಜಿಲ್ಲಾ ಜೊತೆ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಋಣಮುಕ್ತ ಹೋರಾಟ ಸಮಿತಿ ಮುಖಂಡರಾದ ರೇಶ್ಮ, ಸುಹಾನ, ರಝಿಯಾ, ಝೀನತ್, ಸುಮಯ್ಯ, ರೆಹಮಾನ್, ಡಿವೈಎಫ್‌ಐ ಬೆಂಗ್ರೆ ಮುಖಂಡರಾದ ಹನೀಫ್ ಬೆಂಗ್ರೆ, ನೌಶಾದ್ ಬೆಂಗ್ರೆ, ಪಿಜಿ ರಪೀಕ್,ರಫೀಕ್ ಅಪ್ಪಿ, ನಾಸೀರ್, ಬಿಲಾಲ್, ರಿಝ್ವಾನ್, ಯಹಿಯಾ, ಶಾಫಿಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆ ಮುನ್ನ ಬೆಂಗ್ರೆಯ ಮುಖ್ಯ ರಸ್ತೆಯ ಸಲೀಂ ಅಂಗಡಿ ಬಳಿಯಿಂದ ಧರ್ಮಸ್ಥಳ ಧರ್ಮಸ್ಥಳ ಸಂಘದ ಯೋಜನೆ ಕಚೇರಿ ವರೆಗೆ ಸಾಲ ಸಂತ್ರಸ್ತರು ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು. ನೂರಕ್ಕೂ ಮಿಕ್ಕಿ ಸಾಲ ಸಂತ್ರಸ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







