ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಮಂಗಳೂರು, ಫೆ.15: ದೇಶದಲ್ಲಿ ಸುಮಾರು 15 ಮಿಲಿಯನ್‌ನಷ್ಟು ಅಂಧರು ಇದ್ದಾರೆ. ಆ ಪೈಕಿ ಮೂರನೇ ಒಂದು ಭಾಗದಷ್ಟು ಭಾರತದಲ್ಲಿರುವುದು ಕಳವಳಕಾರಿ ವಿಚಾರವಾಗಿದೆ. ಅಂಧರ ಬಗ್ಗೆ ಯಾವತ್ತೂ ಅನುಕಂಪಬೇಕಾಗಿಲ್ಲ. ಅವರಲ್ಲೂ ಸಾಕಷ್ಟು ಪ್ರತಿಭಾವಂತರು ಇದ್ದಾರೆ ಎಂದು ತೇಜಸ್ವಿನಿ ಆಸ್ಪತ್ರೆಯ ಚೇರ್‌ಮ್ಯಾನ್ ಡಾ. ಶಾಂತಾರಾಮ ಶೆಟ್ಟಿ ಎಂ ಹೇಳಿದರು.
ವೆಲೆನ್ಸಿಯಾ ಲಯನ್ಸ್ ಕ್ಲಬ್ ವತಿಯಿಂದ ನಗರದ ಕರಾವಳಿ ಮೈದಾನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಧರ ಬದುಕಿಗೆ ಬ್ರೈಲ್ ಲಿಪಿ ಬಂದ ಬಳಿಕ ಸಾಕಷ್ಟು ನೆರವಾಗಿದೆ. ಅವರಲ್ಲಿ ಸಾಕಷ್ಟು ಮಂದಿ ವೈದ್ಯರು, ವಿಜ್ಞಾನಿಗಳ ಸಹಿತ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಈ ಕ್ರಿಕೆಟ್ ಪಂದ್ಯಾಟದ ಮೂಲಕ ಅವರ ಪ್ರತಿಭೆ, ಸಾಮರ್ಥ್ಯವನ್ನು ಸಮಾಜಕ್ಕೆ ತೋರಿಸುವ ಕೆಲಸವಾಗುತ್ತಿದೆ ಎಂದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾಟ ಆಯೋಜಿಸುವುದು ಶ್ಲಾಘನೀಯ. ಇಂತಹ ಕ್ರಿಕೆಟ್ ಪಂದ್ಯಾಟದ ಮೂಲಕ ಅವರ ಪ್ರತಿಭೆ ಅನಾವರಣಗೊಳ್ಳಲಿದೆ ಎಂದರು.
ಈ ಸಂದರ್ಭ ವೆಲೆನ್ಸಿಯಾ ಲಯನ್ಸ್ ಕ್ಲಬ್ ಅಧ್ಯಕ್ಷ ಲೆಸ್ಲಿ ಡಿಸೋಜ, ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕಾರ್ಯದರ್ಶಿ ಓಸ್ವಾಲ್ಡ್ ಡಿಕುನ್ಹ, ಖಜಾಂಚಿ ಸಿರಿಲ್ ಜೀವನ್ ಉಪಸ್ಥಿತರಿದ್ದರು. ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ನಾನಾ ಕಡೆಗಳಿಂದ 4 ಅಂಧರ ಕ್ರಿಕೆಟ್ ತಂಡಗಳು ಭಾಗವಹಿಸಿತ್ತು. ಸಮಾರೋಪದಲ್ಲಿ ಲಯನ್ಸ್‌ನ ಮಾಜಿ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್, ಯುವ ಕಲ್ಯಾಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಪ್ರದೀಪ್ ಡಿಸೋಜ, ಎಸ್.ಒ.ಬಿ.ಕೆ. ನ ಕ್ರೀಡಾ ನಿರ್ದೇಶಕ ನಾರಾಯಣ ಶೇರಿಗಾರ್ ಭಾಗವಹಿಸಿದ್ದರು.