ಅಂಚೆ ಇಲಾಖೆಯ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಗೆ ಅವಕಾಶ

ಮಂಗಳೂರು, ಫೆ,15: ಕೇಂದ್ರ ಸರಕಾರದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಗೆ ದ.ಕ.ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಬಾರಿ ಮಂಗಳೂರು ವಿಭಾಗದಲ್ಲಿ 23,793 ಮಹಿಳಾ ಸಮ್ಮಾನ್ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಈ ಬಾರಿ 11,194 ಮಹಿಳೆಯರು ಖಾತೆ ತೆರೆದು ನಗದು ಠೇವಣಿ ಇರಿಸಿದ್ದಾರೆ.
2023ರ ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಈ ಯೋಜನೆಯು 2025ರ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿದೆ. ಎರಡು ವರ್ಷದ ಅವಧಿಗೆ ಮಹಿಳೆಯರು ಈ ಯೋಜನೆಯಡಿ ಕನಿಷ್ಠ 1 ಸಾವಿರ ರೂ.ನಿಂದ 2 ಲಕ್ಷ ರೂ. ಗಳವರೆಗೆ ಠೇವಣಿ ಇಟ್ಟರೆ ಶೇ.7.5ರ ಆಕರ್ಷಕ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸುವ ಯೋಜನೆ ಇದಾಗಿದೆ.
2 ಲಕ್ಷ ರೂ.ಠೇವಣಿ ಇರಿಸಿದರೆ ಖಾತೆದಾರರಿಗೆ ಬಡ್ಡಿ ಸಹಿತ 2,32,044 ರೂ.ವನ್ನು ಹಿಂದಿರುಗಿಸಲಾಗುತ್ತದೆ. ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಮಹಿಳೆಯರಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಒಬ್ಬ ಮಹಿಳೆಯ ಹೆಸರಿನಲ್ಲಿ ಒಂದು ಠೇವಣಿ ಇಡಲು ಅವಕಾಶವಿದೆ. ಮೂರು ತಿಂಗಳ ನಂತರ ಮತ್ತೊಮ್ಮೆ ಠೇವಣಿ ಇಡಬಹುದು ಎಂದು ಪ್ರಕಟನೆ ತಿಳಿಸಿದೆ.