ಆಲಿಸ್ ಫರ್ನಾಂಡಿಸ್ಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ

ಮಂಗಳೂರು, ಫೆ.16: ನಗರದ ಬಜ್ಜೋಡಿಯ ಸಂದೇಶ ಪ್ರತಿಷ್ಠಾನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕೊಂಕಣಿ ಲೇಖಕ್ ಸಂಘ ಕರ್ನಾಟಕ ನೀಡುವ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಆಲಿಸ್ ಫರ್ನಾಂಡಿಸ್ (ಶಾಲಿನಿ ವೆಲನ್ಸಿಯಾ)ರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುವ ಕರ್ನಾಟಕದ ಕೊಂಕಣಿ ಬರಹಗಾರರನ್ನು ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದು ಸಂಘದ ಮುಖ್ಯ ಉದ್ದೇಶ ಎಂದು ಹೇಳಿದರು.
ತನ್ನ ಸಾಹಿತ್ಯ ರಚನೆಯ ಪ್ರಯಾಣವನ್ನು ವಿವರಿಸಿದ ಪ್ರಶಸ್ತಿಗೆ ಭಾಜನರಾದ ಆಲಿಸ್ ಫೆರ್ನಾಂಡಿಸ್ ಈ ವರ್ಷದ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಸಂಘಕ್ಕೆ ಧನ್ಯವಾದ ಅರ್ಪಿಸಿದರು.
ರಾಕ್ನೋದ ಸಂಪಾದಕ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿ ಫಾದರ್ ರೂಪೇಶ್ ಮಾಡ್ತಾ, ಕೃತಕ ಬುದ್ಧಿಮತ್ತೆಯ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಇದು ಮುಂಬರುವ ವರ್ಷಗಳಲ್ಲಿ ಬರಹಗಾರರ ಸಾಹಿತ್ಯಿಕ ಉತ್ಸಾಹವನ್ನು ಕುಗ್ಗಿಸಬಹುದು ಎಂದು ಎಚ್ಚರಿಸಿದರು. ಬರಹಗಾರರು ಈ ಸವಾಲಿಗೆ ಸಿದ್ಧರಾಗಿರಬೇಕು ಎಂದು ಅವರು ಆಗ್ರಹಿಸಿದರು.
ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಆಡಿ ರೇಗೋ, ಬರಹಗಾರರನ್ನು ಬೆಂಬಲಿಸುವಲ್ಲಿ ಸಂಘದ ಪ್ರಯತ್ನಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ, ಡಾ. ಚಾರ್ಲ್ಸ್ ಲೋಬೊ ಅವರ ‘ಮಜ್ಯಾವಂತ್ಯಾಚೋ ಸೂರ್ಯೋ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿಗಳನ್ನು ಪಡೆದ ಕೊಂಕಣಿ ಬರಹಗಾರರು ಮತ್ತು ಕಲಾವಿದರನ್ನು ಸನ್ಮಾನಿಸಲಾಯಿತು.
ಡಾ. ಎಡ್ವರ್ಡ್ ನಜರೆತ್ ಸ್ವಾಗತಿಸಿದರು, ಕಾರ್ಯಕಾರಿ ಸಮಿತಿ ಸದಸ್ಯ ಡಾಲ್ಫಿ ಲೋಬೊ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು ಮತ್ತು ಡಾ. ಆನಿ ಕ್ಯಾಸ್ಟೆಲಿನೊ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಹೆನ್ರಿ ಮಸ್ಕರೇನ್ಹಸ್ ವಂದಿಸಿದರು, ಲವಿನಾ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.
ಖ್ಯಾತ ಕೊಂಕಣಿ ಮತ್ತು ಕನ್ನಡ ಬರಹಗಾರ ಫಾ. ಪ್ರಶಾಂತ್ ಮಾಡ್ತಾ, ರಾಕ್ನೋದ ಮಾಜಿ ಸಂಪಾದಕ ಫಾ.ಎರಿಕ್ ಕ್ರಾಸ್ತಾ ಮತ್ತು ಖ್ಯಾತ ಕಲಾವಿದ ಫ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







