ಸುಳ್ಯಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ; ಅಹವಾಲು ಸಲ್ಲಿಕೆ

ಸುಳ್ಯ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ರವಿವಾರ ಸುಳ್ಯಕ್ಕೆ ಭೇಟಿ ನೀಡಿದ್ದು, ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಅಹವಾಲು ಸ್ವೀಕರಿಸಿದರು.
ಈ ವೇಳೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಎಂ.ಬಿ.ಸದಾಶಿವ ಅವರು ಮಾತನಾಡಿ, ಸುಳ್ಯ ನಗರದಲ್ಲಿ ಮಾಣಿ-ಮೈಸೂರು ಹೆದ್ದಾರಿ ಮೂಲಕ ಹಾದು ಹೋಗುತ್ತಿದ್ದು, ಇಲ್ಲಿನ ಇಲ್ಲಿನ ವಾಹನ ದಟ್ಟಣೆ ನಿಯಂತ್ರಿಸಲು ಹಾಗೂ ನಗರದ ಅಭಿವೃದ್ಧಿ ಹಿನ್ನಲೆಯಲ್ಲಿ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸಬೇಕು ಬೈಪಾಸ್ ರಸ್ತೆಯ ಆಗತ್ಯದ ಬಗ್ಗೆ ಎಂದು ಅಹವಾಲು ಸಲ್ಲಿಸಿದರು. ಈ ಬಗ್ಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸುತ್ತೇನೆ ಎಂದರು.
ಸುಳ್ಯ ಕ್ಷೇತ್ರದಲ್ಲಿ ವಿವಿಧೆಡೆ ಸೇತುವೆಗಳು, ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ನಿಂತಿವೆ ಹಾಗೂ ವಿವಿಧೆಡೆ ರಸ್ತೆ, ಸೇತುವೆ ಅಭಿವೃದ್ಧಿ ಬೇಡಿಕೆಯಿದ್ದು ಇಲ್ಲಿನ ಅಭಿವೃದ್ಧಿಗೆ ಇಲಾಖೆಯಿಂದ ಅನುದಾನ ನೀಡಬೇಕು ಎಂದು ಶಾಸಕರು ಮನವಿ ಮಾಡಿಕೊಂಡರು. ಸಚಿವರು ಇಂಜಿನಿಯರ್ ಅವರನ್ನು ಕರೆಸಿ ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿ ದರು. ಕ್ಷೇತ್ರದ ಬೇಡಿಕೆಗಳ ಬಗ್ಗೆ ಆಧಿಕಾರಿಗಳಿಂದ ಮಾಹಿತಿ ಪಡೆದು ಆನುದಾನ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪುತ್ತೂರು-ಕಾಣಿಯೂರು-ಸುಬ್ರಹ್ಮಣ್ಯ ಹೆದ್ದಾರಿಯ ಮುರುಳ್ಯ ಸಮೀಪ ಬೊಬ್ಬೆಕೇರಿ ಎಂಬಲ್ಲಿ ಹೆದ್ದಾರಿ ಬದಿ ಧರೆ ಕುಸಿದು ರಸ್ತೆ ಕಡಿತ ಭೀತಿಯಲ್ಲಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು. ಇಲ್ಲಿನ ಸಮಸ್ಯೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಕೆಯಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಜಿ.ಪಂ., ಲೋಕೋಪಯೋಗಿ ಇಲಾಖೆ ರಸ್ತೆಗಳು ಹಾಳಾಗುತ್ತಿದೆ, ಈ ರೀತಿ ಆಗಲು ಬಿಡಬಾರದು ಎಂದು ರಾಧಾಕೃಷ್ಣ ಬೊಳ್ಳೂರು ಪ್ರಸ್ತಾಪಿಸಿದರು. ಈ ಬಗ್ಗೆ ಗಮನಹರಿಸಲು ಸಚಿವರು ಇಂಜಿನಿಯರ್‍ಗಳಿಗೆ ಸೂಚಿಸಿದರು.
ಸುಳ್ಯದಲ್ಲಿ ಹೆಲಿಪ್ಯಾಡ್ ನಿರ್ಮಿಸಿ
ಸುಳ್ಯಕ್ಕೆ ಸಚಿವರು, ಗಣ್ಯರು ಆಗಮಿಸುವ ವೇಳೆ ಹೆಲಿಕಾಫ್ಟರ್‍ನಲ್ಲಿ ಆಗಮಿಸಿದಲ್ಲಿ ಅವರಿಗೆ ಇಲ್ಲಿ ಶಾಶ್ವತ ಹೆಲಿಪ್ಯಾಡ್ ಇಲ್ಲ. ಆದ್ದರಿಂದ ಸುಳ್ಯದಲ್ಲಿ ಹೆಲಿಪ್ಯಾಡ್ ನಿರ್ಮಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಪ್ರಸ್ತಾಪಿಸಿದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ, ಪರಿಶೀಲನೆ ನಡೆಸುತ್ತೇನೆ ಎಂದು ಸಚಿವರು ತಿಳಿಸಿದರು. ಸುಳ್ಯ ನಗರದಲ್ಲಿ ಒಳಚರಂಡಿ ಸಮಸ್ಯೆ ಸರಿಪಡಿಸುವಂತೆ, ಸುಳ್ಯದ ಪುರಭವನ ಅಭಿವೃದ್ಧಿಗೆ ಅನುದಾನ ನೀಡುವಂತೆ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮನವಿ ಸಲ್ಲಿಸಿದರು. ಸುಳ್ಯದ ಜಟ್ಟಿಪಳ್ಳ-ಕೊಡಿಯಾಲ ರಸ್ತೆ ಅಭಿವೃದ್ಧಿಗೆ, ಸುಳ್ಯ ಮೂಲಕ ಕೇರಳ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡುವಂತೆ, ಮಡಿಕೇರಿ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡುವಂತೆ, ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸಚಿವರಿಗೆ ಅಹವಾಲು ಸಲ್ಲಿಸಲಾಯಿತು. ಸುಳ್ಯದ ಬೇಡಿಕೆ, ಸಮಸ್ಯೆಗಳ ಬಗ್ಗೆ ವಿವಿಧ ಪಕ್ಷದ ಮುಖಂಡರು ಸಚಿವರಲ್ಲಿ ಪ್ರಸ್ತಾಪಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಲೋಕೋಪಯೋಗಿ ಇಲಾಖೆ ಶಿವಮೊಗ್ಗ ಕೇಂದ್ರ ವಲಯ ಮುಖ್ಯ ಇಂಜೀನಿಯರ್ ಜಗದೀಶ್, ಮಂಗಳೂರು ವೃತ್ತ ಅರಕ್ಷಕ ಇಂಜೀನಿಯರ್ ಗೋಕುಲದಾಸ್, ಮಂಗಳೂರು ಇಇ ಅಮರನಾಥ್ ಜೈನ್, ಎಇಇ ರಾಜೇಶ್ ರೈ, ಸುಳ್ಯ ಇಂಜೀನಿಯರ್‍ಗಳಾದ ಗೋಪಾಲ್, ಪರಮೇಶ್ವರ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಶಶಿಕಲಾ ನೀರಬಿದಿರೆ, ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ಹಮೀದ್ ಕುತ್ತಮೊಟ್ಟೆ, ಕೃಷ್ಣಪ್ಪ ಜಿ., ಟಿ.ಎಂ.ಶಹೀದ್, ಎಂ.ವೆಂಪ್ಪ ಗೌಡ, ಎಂ.ಬಿ.ಸದಾಶಿವ, ಶಿಲ್ಪಾ ಸುದೇವ್, ರಿಯಾಝ್, ಶರೀಫ್, ಮುಸ್ತಫಾ, ರಾಜು ಪಂಡಿತ್, ಪಿ.ಎಸ್, ಗಂಗಾಧರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.