ಬೇಡಿಕೆಗಳ ಈಡೇರಿಕೆಗೆ ಒತ್ತಾಯ| ಕಾನೆಕೆರೆ ನಿವಾಸಿಗಳಿಂದ ಬೆಳ್ಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ

ಕೊಣಾಜೆ: ಬಹುಮಹಡಿ ಕಟ್ಟಡ ಹಾಗೂ ಪೆಟ್ರೋಲ್ ಪಂಪು ತಡೆಗೋಡೆ ಕುಸಿತದ ಅಪಾಯ ಸಮಸ್ಯೆ ಸೇರಿದಂತೆ ಡ್ರೈನೇಜ್ ವ್ಯವಸ್ಥೆಯಿಲ್ಲದೆ ಬಹುಮಹಡಿ ಕಟ್ಟಡಕ್ಕೆ ಪರವಾನಿಗೆ ಕೊಟ್ಟ ಬೆಳ್ಮ ಗ್ರಾಮ ಪಂಚಾಯತ್ ಹಾಗೂ ಇಲ್ಲಿಯ ಮುಖ್ಯ ರಸ್ತೆಯನ್ನು ಮಣ್ಣು ಹಾಕಿ ಬಂದ್ ಮಾಡಿದ ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ಕಾನೆಕೆರೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಕಾನೆಕೆರೆ ನಿವಾಸಿಗಳು ಬುಧವಾರ ಬೆಳ್ಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ ಐ ಮುಖಂಡರು ಹಾಗೂ ಕಾನೆಕರೆ ನಾಗರಿಕ ಹೋರಾಟ ಸಮಿತಿಯ ಗೌರವ ಸಲಹೆಗಾರರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ದೇರಳಕಟ್ಟೆ ಅಭಿವೃದ್ಧಿ ಪ್ರದೇಶ ಅಂತ ಹೇಳ್ತಿದ್ದೇರೆ ಅದರ ಹಿಂದೆ ಎಷ್ಟು ನೋವಿದೆ ಎನ್ನುವುದಕ್ಕೆ ಕಾನಕೆರೆಯ ನಿವಾಸಿಗಳೇ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಇಲ್ಲಿರುವ ಪೆಟ್ರೋಲ್ ಪಂಪ್ ನ ತಡೆಗೋಡೆ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿಯಲ್ಲಿದೆ. ಅಲ್ಲದೆ ದೇರಳಕಟ್ಟೆಗೆ ಸಂಪರ್ಕಿ ಸುವ ಮುಖ್ಯ ರಸ್ತೆಯನ್ನು ಮಣ್ಣು ಕುಸಿಯುವ ಭೀತಿಯಲ್ಲಿ ಪಿಡಬ್ಲ್ಯುಡಿ ಇಲಾಖೆ ಬಂದ್ ಮಾಡಿದ್ದು, ಇನ್ನೂ ತೆರವುಗೊಳಿಸಿಲ್ಲ. ಅಲ್ಲದೇ ಬಹಮಹಡಿ ಕಟ್ಡಡಗಳಿಂದ ತ್ತಾಜ್ಯದ ನೀರು ಇಲ್ಲಿಯ ರಸ್ತೆಯಲ್ಲೇ ಹರಿದಾಡಿ ಬಾವಿ ನೀರು ಕಲುಷಿತಗೊಂಡಿದೆ. ಎಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ ಇಂತಹ ಅಪಾಯಕಾರಿ ಸ್ಥಿತಿಯಲ್ಲಿಯೂ ಕೂಡಾ ಪಂಚಾಯತ್, ಪಿಡಬ್ಲ್ಯೂಡಿ, ಜಿಲ್ಲಾಡಳಿತ ಮಾತನಾಡದೆ ಮೌನವಾಗಿದ್ದಾರೆ. ಇಲ್ಲಿಯ ಯುವಕರು ಕಳೆದ ಹನ್ನೆರಡು ವರ್ಷಗಳಿಂದ ಬೇರೆ ಬೇರೆ ಇಲಾಖೆಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಸ್ಪೀಕರ್ ಯು.ಟಿ.ಖಾದರ್ ಆಗಲೀ, ಇತರ ಅಧಿಕಾರಿಗಳಿಗಳಾಗಲೀ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಿಲ್ಲ. ಪಂಚಾಯಿತಿಯ ಹಿಂಭಾಗವೇ ತ್ಯಾಜ್ಯದ ರಾಶಿ ಇದ್ದರೂ ಈ ಪಂಚಾಯತಿಗೆ ಸ್ವಚ್ಛತೆ ಪ್ರಶಸ್ತಿ ಬಂದಿರುವುದು ಯಾವ ಕರ್ಮಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನಾವೆಲ್ಲರೂ ಪಕ್ಷಬೇದ ಜಾತಿ ಬೇಧವನ್ನು ಮರೆತು ಒಟ್ಟಾಗಿದ್ದು ಸಮಸ್ಯೆ ಬಗೆ ಹರಿಯುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ್ ಬಜಾಲ್, ಸಮಿತಿ ಗೌರವ ಅಧ್ಯಕ್ಷರಾದ ರಫೀಕ್ ಕಾನೆಕೆರೆ, ಅಧ್ಯಕ್ಷರಾದ ಅಬ್ದುಲ್ ಖಾದರ್ ಎನ್ ಎಚ್, ಕಾರ್ಯದರ್ಶಿ ಮಹಮ್ಮದ್ ಫಾರೂಕ್, ಸಲಹೆಗಾರರಾದ ರಫೀಕ್ ಹರೇಕಳ, ರಿಝ್ವಾನ್ ಹರೇಕಳ, ಕೋಶಾಧಿಕಾರಿ ರಫೀಕ್, ಇಬ್ರಾಹಿಂ, ಅಬ್ದುಲ್ ಸಲಾಂ, ಮಹಮ್ಮದ್ ಶರೀಫ್, ಇಮ್ರಾನ್ ಕಾನೆಕೆರೆ, ರಿಯಾಝ್ ಕಾನೆಕರೆ, ಅಬ್ದುಲ್ ರಹಿಮಾನ್ ದೇರಳಕಟ್ಟೆ, ಮಸ್ಜಿದುಲ್ ಹುದಾ ದೇರಿಕಟ್ಟೆಯ ಉಪಾಧ್ಯಕ್ಷರಾದ ಇಸ್ಮಾಯಿಲ್, ಖತೀಬರಾದ ಇಸಾಕ್ ಝಹ್ರಿ ಕಾನೆಕೆರೆ, ನಝೀರ್ ಕಾನೆಕೆರೆ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆಗೆ ಮುನ್ನ ದೇರಳಕಟ್ಟೆ ಜಂಕ್ಷನ್ ನಿಂದ ಬೆಳ್ಮ ಪಂಚಾಯತಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಪಂಚಾಯತ್ ಎದುರು ಧರಣಿ ನಡೆಸಿದರು. ಧರಣಿ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿ ಕಾರಿ ಗುರುದತ್ ಅವರು ಆಗಮಿಸಿ ಮನವಿ ಸ್ವೀಕರಿಸಿ ಫೆ.25 ರಂದು ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದರು.
"ಬೆಳ್ಮ ಪಂಚಾಯತಿ ನಮ್ಮ ಬೇಡಿಕೆಯನ್ನಂತೂ ಈಡೇರಿಸುತ್ತಿಲ್ಲ. ಅದರ ಬದಲಾಗಿ ಹೆಣ ತೆಗೆದುಕೊಂಡು ಹೋಗಲು ಹತ್ತು ಆಂಬ್ಯುಲೆನ್ಸ್ ರೆಡಿ ಮಾಡಿ ಇಡಲಿ. ಯಾಕೆಂದರೆ ಇಲ್ಲಿಯ ತಡೆಗೋಡೆಯು ಬಿರುಕು ಬಿಟ್ಡಿದ್ದು ಯಾವಾಗ ಕುಸಿಯುತ್ತದೋ ಎಂದು ಹೇಳಲಾಗದು. ಎರಡು ಬಾವಿಯಲ್ಲಿ ಪೆಟ್ರೋಲ್ ಮಿಶ್ರಿತ ನೀರು ಇತರ ಬಾವಿಗಳಲ್ಲಿ ತ್ಯಾಜ್ಯ ನೀರು ತುಂಬಿ ರೋಗ ರುಜಿನಗಳು ಹೆಚ್ಚಾಗಿವೆ. ಹಲವರು ಜೀವ ಕಳೆದುಕೊಂಡಿದ್ದಾರೆ. ಹಲವರು ಮನೆ ಬಿಟ್ಟು ಹೋಗಿದ್ದಾರೆ. ಇಷ್ಟಾದರೂ ಇವರು ಎಚ್ಷೆತ್ತುಕೊಂಡಿಲ್ಲ".
-ಮಹಮ್ಮದ್ ಫಾರೂಕ್, ಸ್ಥಳೀಯ ನಿವಾಸಿ
"ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ. ಎಳನೀರಿನಂತೆ ಶುದ್ಧವಾಗಿದ್ದ ನೀರು ಇಂದು ಕುಡಿಯಲು ಯೋಗ್ಯವಲ್ಲದಂತಾಗಿದೆ. ತ್ಯಾಜ್ಯಗಳಿಂದ ಇಡೀ ಪರಿಸರವೇ ಮಲೀನಗೊಂಡಿದೆ".
-ರಾಮಚಂದ್ರ ಭಟ್, ಸ್ಥಳೀಯ ನಿವಾಸಿ







