ತಲಪಾಡಿ ಗ್ರಾಮ ಸಭೆಯಲ್ಲಿ ಮೊಳಗಿದ ಟೋಲ್ ಸಮಸ್ಯೆಯ ಗೋಳು

ಉಳ್ಳಾಲ: ಸ್ಥಳೀಯರಿಂದ ಟೋಲ್ ವಸೂಲಿ, ಗ್ರಾ.ಪಂ. ಸದಸ್ಯರ ಗೈರು, ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆ ಗಳ ಕೊರತೆ, ಮುಂತಾದ ವಿಷಯಗಳ ಬಗ್ಗೆ ಪರ,ವೀರೋಧ ಚರ್ಚೆಗಳು ತಲಪಾಡಿ ಗ್ರಾಮ ಸಭೆಯಲ್ಲಿ ನಡೆಯಿತು.
ಅಧ್ಯಕ್ಷ ಇಸ್ಮಾಯಿಲ್ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಪುಷ್ಪಲತಾ ಶೆಟ್ಟಿ ಯ ಅಧ್ಯಕ್ಷತೆಯಲ್ಲಿ ಡಾ.ಅಬ್ದುಲ್ ಕಲಾಂ ಅಜಾದ್ ಸಭಾಂಗಣದಲ್ಲಿ ನಡೆದ ತಲಪಾಡಿ ಗ್ರಾ.ಪಂ. ನ ಎರಡನೇ ಹಂತದ ಗ್ರಾಮ ಸಭೆಯಲ್ಲಿ ಟೋಲ್ ಸಿಬ್ಬಂದಿ ಅವಾಂತರ ಸ್ಥಳೀಯರಿಂದ ಟೋಲ್ ವಸೂಲಿ, ಅವೈಜ್ಞಾನಿಕ ಸರ್ವಿಸ್ ರಸ್ತೆ ಗಳ ವಿಚಾರವಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನೇ ತರಾಟೆಗೈದ ಗ್ರಾಮಸ್ಥರು, ಸರ್ವಿಸ್ ರಸ್ತೆ ಸರಿಪಡಿಸಿದ ಬಳಿಕ ಟೋಲ್ ವಸೂಲಿ ಮಾಡುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳೀಯ 450 ವಾಹನಗಳಿಗೆ ಟೋಲ್ ರಿಯಾಯಿತಿ ಇದೆ. ಟೋಲ್ ರಿಯಾಯಿತಿ ಇರುವ ವಾಹನಗಳ ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ದಾಖಲಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಇದರಿಂದ ಆಕ್ರೋಶ ಗೊಂಡ ಗ್ರಾಮಸ್ಥರು, ಸ್ಥಳೀಯರ ಎಲ್ಲಾ ವಾಹನಗಳಿಗೆ ಟೋಲ್ ದರ ವಿದಿಸಬಾರದು. ಸ್ಥಳೀಯರ ಗುರುತು ಪತ್ತೆ ಗೆ ಆಧಾರ್ ಕಾರ್ಡ್ ಮೂಲ ದಾಖಲೆ ಮಾಡಬೇಕು ಹೊರತು ಆರ್ ಸಿ ಮೂಲ ದಾಖಲೆ ಮಾಡಬಾರದು. ಆರ್ ಸಿ ವಾಹನದ ದಾಖಲೆ. ಅದರಲ್ಲಿ ಬೆಂಗಳೂರು ಎಂದು ನಮೂದು ಇರಬಹುದು. ಆಧಾರ್ ಕಾರ್ಡ್ ನಮ್ಮ ವೈಯಕ್ತಿಕ ದಾಖಲೆ.ಅದನ್ನು ಗುರುತು ಪತ್ತೆ ಗೆ ಬಳಸಬೇಕು. ಗೂಂಡಾ ಪ್ರವೃತ್ತಿ ಹೊಂದಿರುವ ಸಿಬ್ಬಂದಿಯನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳು ಆರ್ ಸಿ ದಾಖಲೆ ಪರಿಗಣಿಸಿ ಸ್ಥಳೀಯರಿಗೆ ಉಚಿತ ಟೋಲ್ ನೀಡಲಾಗುವುದು ಎಂದರು.
ತಲಪಾಡಿ ಯಿಂದ ಕೋಟೆಕಾರ್ ವರೆಗೆ ಸರಿಯಾದ ಸರ್ವಿಸ್ ರಸ್ತೆ ಮಾಡದೇ ಟೋಲ್ ವಸೂಲಿ ಎಷ್ಟು ಸಮಂಜಸ ಎಂದು ಪ್ರಶ್ನಿಸಿದ ಗ್ರಾಮಸ್ಥರು ಮೊದಲು ಸ್ಥಳೀಯರಿಗೆ ಮೂಲ ಭೂತ ವ್ಯವಸ್ಥೆ ಮಾಡಿದ ಬಳಿಕ ಟೋಲ್ ವಸೂಲಿ ಆರಂಭಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೋಡೆಲ್ ಅಧಿಕಾರಿ ಸಿಡಿಪಿಒ ಶೈಲಜಾ ಕಾರ್ಗಿಅವರು ಟೋಲ್ ನ ಸಮಸ್ಯೆ ಬಹಳಷ್ಟು ಇರಬಹುದು. ನಿಮ್ಮ ಸಮಸ್ಯೆ ಹಾಗೂ ಬೇಡಿಕೆ ಗಳ ಬಗ್ಗೆ ಲಿಖಿತ ರೂಪದಲ್ಲಿ ಹೆದ್ದಾರಿ ಇಲಾಖೆ ಹಾಗೂ ಪಂಚಾಯತ್ ಗೆ ನೀಡುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥೆ ಮಹಿಳೆಯೊಬ್ಬರು, ತಲಪಾಡಿ ಯಲ್ಲಿ ಟೋಲ್ ವ್ಯವಸ್ಥೆ ಮಾಡಿದ್ದೀರಿ.ಆದರೆ ಸ್ವಚ್ಛತೆ ಕಾಪಾಡುವುದಿಲ್ಲ.ಕೊಳೆತ ವಸ್ತುಗಳನ್ನು ರಸ್ತೆ ಬದಿ ರಾಶಿ ಹಾಕುವುದು ಸರಿಯೇ? ಚಾಲಕರು, ಸಿಬ್ಬಂದಿ ರಸ್ತೆ ಬದಿ ಆಹಾರ ತಯಾರಿಸಲು ಅವಕಾಶ ನೀಡುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಇದರಿಂದ ರಸ್ತೆಯಲ್ಲಿ ನಡಕೊಂಡು ಹೋಗಲು ನಮಗೆ ಕಷ್ಟಕರ ಆಗುತ್ತಿದೆ ಎಂದರು.
ಈ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೆದ್ದಾರಿ ಅಧಿಕಾರಿಗಳು ಭರವಸೆ ನೀಡಿದಾಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಗ್ರಾಮದ ವಿದ್ಯಾನಗರ ಒಳರಸ್ತೆಯ ಚರಂಡಿ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಚರಂಡಿ ದುರಸ್ತಿ ಮಾಡದೇ ವರ್ಷ ಹಲವು ಆಗಿವೆ.ಇದನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ನಾಲ್ಕು ಮನವಿ ನೀಡಲಾಗಿದೆ. ಆದರೂ ದುರಸ್ತಿ ನಡೆದಿಲ್ಲ. ಕಳೆದ ಮಳೆಗಾಲದಲ್ಲಿ ಮಳೆ ನೀರು ಮನೆಗೆ ನುಗ್ಗಿದೆ.ಇದರಿಂದ ಮದ್ರಸ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ.ಇಲ್ಲಿನ ಸದಸ್ಯ ರು ಕೂಡ ಓಟು ಕೇಳಲು ಮಾತ್ರ ಬರುತ್ತಾರೆ.ಈ ಬಗೆ ಯಾಕೆ ಕ್ರಮ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಝಾಯಿನ್ ಅವರು ಈ ಚರಂಡಿ ದುರಸ್ತಿ ಗೆ ಐದು ಲಕ್ಷ ಅನುದಾನ ಬೇಕು.ಮುಂದಿನ ಹಂತದಲ್ಲಿ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಅನಿರುದ್ಧು, ಆನಂದ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಕೇಶವ ಪೂಜಾರಿ ಸ್ವಾಗತಿಸಿ ವಿಚಾರ ಮಂಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಸಿಬ್ಬಂದಿ ಮಂಜಪ್ಪ ವರದಿ ವಾಚಿಸಿ ವಂದಿಸಿದರು.







