ಕೇಂದ್ರ ಸರಕಾರದಿಂದ ವಕ್ಫ್ ಆಸ್ತಿ ಕಬಳಿಸುವ ಹುನ್ನಾರ : ಎಸ್ಕೆಎಸೆಸ್ಸೆಫ್ ಆರೋಪ
ಮಂಗಳೂರಿನಲ್ಲಿ ವಕ್ಫ್ ಆಸ್ತಿ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟನೆ

ಮಂಗಳೂರು,ಫೆ.21: ಮುಸ್ಲಿಂ ಪೂರ್ವಜರಿಂದ ಪಾರಂಪರ್ಯವಾಗಿ ಬಂದ ವಕ್ಫ್ ಆಸ್ತಿಯನ್ನು ಕೇಂದ್ರ ಸರಕಾರವು ತಿದ್ದುಪಡಿ ಮಸೂದೆಯ ಮೂಲಕ ಕಬಳಿಸಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ ಎಸ್ಕೆಎಸೆಸ್ಸೆಫ್ ಮುಖಂಡರು, ಯಾವ ಕಾರಣಕ್ಕೂ ವಕ್ಫ್ ಆಸ್ತಿಯನ್ನು ಬಿಟ್ಟುಕೊಡುವುದಿಲ್ಲ. ತಿದ್ದುಪಡಿ ಮಸೂದೆಯನ್ನು ಕೈ ಬಿಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ವಕ್ಫ್ ಆಸ್ತಿ ತಿದ್ದುಪಡಿ ಮಸೂದೆಯ ವಿರುದ್ಧ ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯು ನಗರದ ಕ್ಲಾಕ್ ಟವರ್ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನ್ ಫೈಝಿ ವಕ್ಫ್ ಅಲ್ಲಾಹನ ಸೊತ್ತಾಗಿದೆ. ಅಷ್ಟೇ ಅಲ್ಲ, ವಕ್ಪ್ ಆರಾಧನಾ ಕರ್ಮವಾಗಿದೆ. ಅದನ್ನು ಉದ್ದೇಶಿತ ಹೊರತು ಬೇರೆಯದಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ. ಸರಕಾರವು ವಕ್ಫ್ ಆಸ್ತಿಯನ್ನು ಕಬಳಿಸಲು ನಡೆಸುತ್ತಿರುವ ಹುನ್ನಾರಕ್ಕೆ ಸ್ಪಷ್ಟ ವಿರೋಧವಿದೆ ಎಂದರು.
ಎಸ್‌ವೈಎಸ್ ದ.ಕ.ಜಿಲ್ಲಾಧ್ಯಕ್ಷ ಮೌಲಾನಾ ಅಝೀಝ್ ದಾರಿಮಿ ಮಾತನಾಡಿ ಕೇಂದ್ರ ಸರಕಾರವು ವಕ್ಫ್ ಆಸ್ತಿಯ ಸುಧಾರಣೆ, ಅಭಿವೃದ್ಧಿಯ ನೆಪದಲ್ಲಿ ಕಸಿದುಕೊಳ್ಳಲು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ. ಈ ಮಸೂದೆಯು ಗೊಂದಲದಿಂದ ಕೂಡಿದೆ. ಅನುಮಾನ ಮೂಡಿಸುತ್ತಿದೆ. ಆತಂಕಕ್ಕೆ ಕಾರಣವಾಗಿದೆ ಎಂದರು.
ಎಸ್ಕೆಎಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಅನೀಸ್ ಕೌಸರಿ ಮಾತನಾಡಿ ವಕ್ಫ್ ವಿಚಾರದಲ್ಲಿ ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದು ಯಾರದೇ ಔದಾರ್ಯವಲ್ಲ. ಹಕ್ಕಾಗಿದೆ. ಧಾರ್ಮಿಕ ನಂಬಿಕೆಯ ಭಾಗವೂ ಆಗಿದೆ. ತಿದ್ದುಪಡಿ ಮಸೂದೆಯ ಮೂಲಕ ಅದನ್ನು ಸಾರ್ವಜನಿಕಗೊಳಿಸಲು ಬಿಡಲಾರೆವು. ಮುಸ್ಲಿಮರ ಹಿತಕಾಪಾಡು ವುದಾಗಿ ಹೇಳಿಕೊಳ್ಳುವ ಪಕ್ಷಗಳ ನಾಯಕರು ಮತ್ತು ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಧ್ವನಿ ಎತ್ತಬೇಕು ಎಂದರು.
ಸೈಯದ್ ಅಮೀರ್ ತಂಳ್ ದುಆಗೈದರು. ಮುಖ್ಯ ಅತಿಥಿಗಳಾಗಿ ಮುಹಮ್ಮದ್ ರಫೀಕ್ ಹುದವಿ, ಇರ್ಶಾದ್ ದಾರಿಮಿ ಮಿತ್ತಬೈಲ್, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬ್ದುಲ್ ರಶೀದ್ ಹಾಜಿ ಉಳ್ಳಾಲ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಅಬ್ದುಲ್ ರಶೀದ್ ರಹ್ಮಾನಿ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಅಝಿಝ್ ಮಲಿಕ್, ಇಕ್ಬಾಲ್ ಮುಲ್ಕಿ, ಅಶ್ರಫ್ ಮೂಡುಬಿದಿರೆ, ಯಾಸೀರ್ ಕಕ್ಕಿಂಜೆ, ಆರೀಫ್ ಕಮ್ಮೂಜೆ, ಜಲೀಲ್ ಬದ್ರಿಯಾ, ಅಬೂಬಕ್ಕರ್ ಮಂಗಳ, ನಿಝಾರ್ ಬೆಂಗ್ರೆ ಮತ್ತಿತರರಿದ್ದರು.
ಹಾರೀಶ್ ಕೌಸರಿ ಸ್ವಾಗತಿಸಿದರು. ಅಬೂಸ್ವಾಲಿಹ್ ಫೈಝಿ ವಂದಿಸಿದರು.







