ಗ್ರಾಮ ಸಡಕ್‌ಗೆ ಭಿನ್ನವಾಗಿ ಪ್ರಗತಿ ಪಥ, ಕಲ್ಯಾಣ ಪಥ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ ಘೋಷಣೆ

ಮಂಗಳೂರು, ಫೆ. 22: ಸರಕಾರದ ವಿರುದ್ಧ ದುಡ್ಡಿಲ್ಲ ಎಂದು ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ. ದುಡ್ಡಿಲ್ಲ ಎಂದು ಯಾವ ಕಾಮಗಾರಿಯನ್ನೂ ನಿಲ್ಲಿಸಲಾಗಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಿಂತ ಭಿನ್ನವಾಗಿ ಪ್ರಗತಿ ಪಥ ಎಂಬ ಯೋಜನೆಯನ್ನು ರಾಜ್ಯ ಸರಕಾರ ಒಂದು ತಿಂಗಳೊಳಗೆ ಜಾರಿಗೊಳಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮ ಸ್ವರಾಜ್ ಪ್ರತಿಷ್ಠಾನ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಮಂಗಳೂರು ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಶನಿವಾರ ನಡೆದ ‘ಹೊಂಬೆಳಕು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಗತಿ ಪಥ ಹೆಸರಿನಲ್ಲಿ 7110 ಕಿ.ಮೀ. ಗ್ರಾಮೀಣ ರಸ್ತೆಗಳಿಗೆ 5190 ಕೋಟಿ ರೂ.ಗಳನ್ನು ಖರ್ಚು ಮಾಡಲಾ ಗುತ್ತದೆ. ಇಲ್ಲಿ ಪ್ರಗತಿ ಪಥವಾದರೆ, ನಮ್ಮಲ್ಲಿ ಕಲ್ಯಾಣ ಪಥದಡಿ 1,150 ಕಿ.ಮೀ. ರಸ್ತೆಯನ್ನು 1 ಸಾವಿರ ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಪಾಕೃತಿಕ ವಿಕೋಪದಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳ ದುರಸ್ತಿಗೆ ಪ್ರತಿ ಕ್ಷೇತ್ರಕ್ಕೆ ತಲಾ 10 ಕೋಟಿ ರೂ.ಗಳಂತೆ 189 ಕ್ಷೇತ್ರಗಳಿಗೆ 1890 ಕೋಟಿರೂ. ಬಿಡುಗಡೆ ಕೆಲವೆಡೆ ಕೆಲಸ ಆರಂಭವಾಗಿದೆ. ರಾಜ್ಯದ 5770 ಅರಿವು ಕೇಂದ್ರಗಳಲ್ಲಿ 51 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಕೆಎಎಸ್ ಪ್ರಿಲಿಮ್ಸ್‌ನಲ್ಲಿಯೂ ಅರಿವು ಕೇಂದ್ರದಲ್ಲಿ ತರಬೇತು ಹೊಂದಿದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಭಾರತ ಸರಕಾರದ ಸ್ವಚ್ಛ ಭಾರತದ ಕನಸು ನನಸಾಗಿಸಲು ರಾಜ್ಯದಲ್ಲಿ 5712 ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ತಲಾ 2 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಘಟಕಗಳು ಅತ್ಯಂತ ಪರಿಣಾಮಕಾರಿ ಕಾರ್ಯಗತವಾಗುತ್ತಿವೆ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಭಾತೃತ್ವದ ಮನೋಭಾವನೆಯಿಂದಲೇ ಕೆಲಸ ಮಾಡುತ್ತಿದ್ದು, ಸರಕಾರದ ಯಾವುದೇ ನೀತಿ, ಯೋಜನೆ ಗಳು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಸ್ವಾಭಿಮಾನದ ಬದುಕು ನೀಡುವ ಜತೆಗೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಸಿಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಯೋಜನೆಗಳ ಉದ್ದೇಶ ಆರ್ಥಿಕ, ಸಾಮಾಜಿಕ ಸಮಾ ನತೆ, ಸ್ವಾಭಿಮಾನದ ಬದುಕು ನೀಡುವಂತದ್ದು. 2005ರಲ್ಲಿ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯಡಿ ನಮ್ಮ ಇಲಾಖೆಯಿಂದ 13 ಕೋಟಿ ಮಾನವ ದಿನ ಸೃಷ್ಟಿಸುವ ಗುರಿ ಹೊಂದಲಾಗಿದೆ. 27 ಲಕ್ಷ ಕುಟುಂಬಗಳ 47 ಲಕ್ಷ ಜನ ಇದರ ಪ್ರಯೋಜನ ಪಡೆದಿದ್ದಾರೆ. ಸರಕಾರ ಹಂತದಲ್ಲಿ ಆಗದ 1466000 ಸಣ್ಣ ಪುಟ್ಟ ಕಾಮಗಾರಿಗಳನ್ನು ಸ್ಥಳೀಯಾಡಳಿತದ ಮೂಲಕ ನಡೆಯುತ್ತಿದೆ. ಕೂಸಿನ ಮನೆ ಎಂಬ ವಿನೂತ 3867 ಕೂಸಿನ ಮನೆಗಳು ರಾಜ್ಯಾದ್ಯಂತ ನಡೆಯುತ್ತಿದೆ. ಈ ಕೂಸಿನ ಮನೆಗಳಲ್ಲಿ 47888 ಮಕ್ಕಳ ಪೋಷಣೆಯಾಗುತ್ತಿದೆ ಎಂದವರು ವಿವರಿಸಿದರು.
ಪಂಚಾಯತ್ ವಿಕೇಂದ್ರೀಕರಣ ಕುರಿತು ಎಲ್ಲಾ ರಾಜ್ಯಗಳಲ್ಲಿ ಕೇಂದ್ರ ಸರಕಾರದಿಂದ ನಡೆಸಲಾದ ಅಧ್ಯಯನ ವರದಿ ಪ್ರಕಾರ ದೇಶದಲ್ಲಿ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ನಂಬರ್ 1 ಎಂಬ ಬಿರುದು ನೀಡಿದೆ. ಇದಕ್ಕೆ ಕಾರಣರಾದ ಪಂಚಾಯತ್ ಸದಸ್ಯರು, ಅಧಿಕಾರಿಗಳು ಕಾರಣರಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ, ಕ್ರೀಡೆ, ಜಾನಪದ ಕಲೆ ಹವ್ಯಾಸವಾಗಿ ಮಾತ್ರವಲ್ಲದೆ, ದೈಹಿಕ, ಮಾನಸಿಕ ಆರೋಗ್ಯದ ಜತೆಗೆ ಶಿಸ್ತು, ಸಮಯ ಪ್ರಜ್ಞೆ, ಸಮಯ ನಿರ್ವಹಣೆ, ನಾಯಕತ್ವವನ್ನೂ ಕಲಿಸುತ್ತದೆ. ಯಶಸ್ಸು ಹಾಗೂ ವೈಫಲ್ಯವನ್ನು ಯಾವ ರೀತಿ ನಿಭಾಯಿಸಬಹುದು ಎಂಬುದನ್ನು ಹೇಳಿಕೊಡುತ್ತದೆ. ಇಲ್ಲಿ ಕಲಿತ ತಂಡ ಸ್ಪೂರ್ತಿ ಹಾಗೂ ಯಶಸ್ಸಿನ ನಿರ್ವಹಣೆಯ ಪಾಠ ನಮ್ಮ ಕೆಲಸಗಳಲ್ಲಿ ಅಳವಡಿಸಿಕೊಳ್ಳಬೇಕು. ಸಮಯಪ್ರಜ್ಞೆ, ಸ್ಪಂದನೆ, ಸಮನ್ವಯತೆ, ಪರಿಣಾಮಕಾರಿ ಅನುಷ್ಠಾನ ಹಾಗೂ ಹೊಣೆಗಾರಿಕೆ ಎಂಬ ಪಂಚ ಸೂತ್ರಗಳಡಿ ಪಂಚಾಯತ್‌ಗಳು ಕಾರ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಸ್ಥಳೀಯಾಡಳಿತಗಳಲ್ಲಿ 40 ವರ್ಷಗಳಿಂದ ಇದ್ದ ಇ ಖಾತಾ ಸಮಸ್ಯೆ ನಿವಾರಿಸಿ ಇ ಖಾತಾ ಹಾಗೂ ಬಿ ಖಾತಾ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯವರ್ತಿಗಳಿಲ್ಲದೆ ಆಂದೋಲನ ಮಾದರಿಯಲ್ಲಿ ಇ ಖಾತೆ ನೀಡಲು ಸೂಚನೆ ನೀಡಲಾಗಿದೆ ಎಂದರು.
ಹೊಂಬೆಳಕು ಕಾರ್ಯಕ್ರಮದ ರುವಾರಿ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, 8000 ಮಂದಿ ಚುನಾಯಿತ ಜನಪ್ರತಿನಿಧಿ ಹಾಗೂ ಸ್ಥಳೀಯ ಅಧಿಕಾರಿಗಳಲ್ಲಿ ಒಟ್ಟು 7600 ನೋಂದಾಯಿಸಿ ಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದ್ದಾರೆ. ಮುಂದಿನ ಬಜೆಟ್ ನಲ್ಲಿ ಜಾಪನದ ಕ್ರೀಡೆಗೆ ಅನುದಾನ ಮೀಸಲಿಟ್ಟು, ಇಂತಹ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸರಕಾರ ದಿಂದ ನಡೆಯುವಂತೆ ಆಗ್ರಹಿಸಿದರು.
ವೇದಿಕೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ರೈ, ಉಮಾನಾಥ ಕೋಟ್ಯಾನ್, ಐವನ್ ಡಿಸೋಜಾ, ಕಿಶೋರ್ ಕುಮಾರ್, ಮಾಜಿ ಶಾಸಕ ಅಭಯ ಚಂದ್ರ ಜೈನ್, ಶಕುಂತಳಾ ಶೆಟ್ಟಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ನರೇಂದ್ರ ಸ್ವಾಮಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನ್ಲಿ ಅಲ್ವಾರಿಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಇನಾಯತ್ ಫೌಂಡೇಶನ್‌ನ ಇನಾಯತ್ ಅಲಿ, ಎಡಿಜಿಪಿ ನಂಜುಂಡ ಸ್ವಾಮಿ, ಬೆಸ್ಟ್ ಫೌಂಡೇಶನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ, ಗುರುಬೆಳದಿಂಗಳು ಫೌಂಡೇಶನ್‌ನ ಪದ್ಮರಾಜ್, ಜಿ.ಎ. ಬಾವ, ಗ್ಯಾರಂಟಿ ಅನುಷ್ಠಾನ ಸಮಿತಿ ದ.ಕ. ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಕಾಚಂನ್ ಹೋಂಡಾದ ಮಾಲಕ ಪ್ರಸಾದ್ ಕಾಂಚನ್, ಜಿ.ಪಂ. ಮಾಜಿ ಉಪಾಧ್ಯಕ, ಎಂ.ಎಸ್. ಮುಹಮ್ಮದ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮನಪಾ ಸದಸ್ಯ ವಿನಯ್ ರಾಜ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಪ್ರಮುಖರಾದ ಕೃಷ್ಣ ಹೆಗ್ಡೆ, ಅಶೋಕ್ ಕೊಡವೂರು, ರಾಜು ಪೂಜಾರಿ, ಬಾಲರಾಜ್, ಸದಾನಂದ ಮಾವಂಜೆ, ಅರವಿಂದ ಕುಮಾರ್, ಶ್ರೀನಿವಾಸ್ ರಾವ್, ಗ್ರಾಮ ಸ್ವರಾಜ್ ಪ್ರತಿಷ್ಠಾನದ ಕಾರ್ಯದರ್ಶಿ ಲಾರೆನ್ಸ್ ಡಿಸೋಜಾ, ಕೋಶಾಧಿಕಾರಿ ಪ್ರವೀಣ್ ಚಂದ್ರ ಆಳ್ವ, ಟ್ರಸ್ಟಿಗಳಾದ ಉದಯ್ ಕುಮಾರ್ ಶೆಟ್ಟಿ, ಅನಿಲ ಕುಮಾರ್, ಆನಂದ ಪೂಜಾರಿ ಕಿರುಮಂಜೇಶ್ವರ ಇನ್ನಿತರರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸ್ವಾಗತಿಸಿದರು.
ಸರಕಾರದ ಸಹಭಾಗಿತ್ವದಲ್ಲಿ ಹೊಂಬೆಳಕು ಆಯೋಜನೆಗೆ ಪರಿಶೀಲನೆ
ಪಂಚಾಯಿತಿ, ನಗರ ಸ್ಥಳೀಯಾಡಳಿತದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಾಗಿ ಮಂಗಳೂರಿನಲ್ಲಿ ‘ಹೊಂಬೆಳಕು’ ಶೀರ್ಷಿಕೆಯಲ್ಲಿ ಆಯೋಜಿಸುತ್ತಿರುವ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ವಿಭಿನ್ನವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸುವ ಜಿಲ್ಲೆಗಳಿಗೆ ಸರಕಾರ ಸಹಭಾಗಿತ್ವ ಒದಗಿಸುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಶೀಲಿಸುವುದಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದಾರೆ.
‘ಹೊಂಬೆಳಕು’ ವಿವಿಧ ತಂಡಗಳ ಪಥ ಸಂಚಲನ
ಗಮನ ಸೆಳೆದ ಕಂಬಳ ಕೋಣಗಳು, ಕೋಳಿ ಅಂಕ, ಹುಲಿ ವೇಷ!
ಅಡ್ಯಾರ್‌ನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಸ್ವರಾಜ್ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಎರಡನೇ ಆವೃತ್ತಿಯ ಹೊಂಬೆಳಕು ಕಾರ್ಯಕ್ರಮದಲ್ಲಿ ನನ್ನ ಕನಸಿನ ಭಾರತ, ಗ್ರಾಮ ಸ್ವರಾಜ್ಯ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಥೀಮ್ ಪಥ ಸಂಚಲನವನ್ನು ಆಯೋಜಿಸಲಾಗಿತ್ತು. ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಕೂಡಿದ ಪಥ ಸಂಚಲನದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳದ ಕೋಣಗಳು, ಕೋಳಿ ಅಂಕ, ಹುಲಿ ವೇಷ, ಆಟಿ ಕಳಂಜದ ಜತೆಗೆ ಮಹಿಷಾಸುರ ಮರ್ಧಿನಿಯ ಟ್ಯಾಬ್ಲೋಗಳು ವಿಶೇಷ ಆಕರ್ಷಣೆ ನೀಡಿದವು.
ಉಳಾಯಿಬೆಟ್ಟು ತಂಡದ ಎತ್ತಿನಗಾಡಿಯನ್ನು ಪ್ರತಿಬಿಂಬಿಸುವ ಟ್ಯಾಬ್ಲೋ, ಸುಳ್ಯ ಪಣ್ಣ ಪಂಚಾಯತ್‌ನಿಂದ ಕಂಬಳದ ಪ್ರತಿಕೃತಿಗಳು ಪಥ ಸಂಚಲದಲ್ಲಿ ಪಾಲು ಪಡೆದರೆ, ಮುನ್ನೂರು ಉಳ್ಳಾಲ ತಂಡವು ಕೃಷಿ ಕಂಬಳವನ್ನು ಪ್ರತಿನಿಧಿಸಿತು. ಮಿತ್ತೂರಿನ ತಂಡವು ಸಂವಿಧಾನದ ಪೀಠಿಕೆಯ ಮೂಲಕ ಗಮನ ಸೆಳೆದರೆ, ಹಾರಾಡಿ ಗ್ರಾ.ಪಂ. ತಂಡವು ಮದುವೆ ದಿಬ್ಬಣದೊಂದಿಗೆ ಪಥ ಸಂಚಲದಲ್ಲಿ ಭಾಗಿಯಾಗಿ ಪೌರೋಹಿತ್ಯದಲ್ಲಿ ನಡೆಯುವ ಕರಾವಳಿಯ ಮದುವೆ ಆಚರಣೆಯನ್ನು ವೇದಿಕೆಯ ಎದುರು ಪ್ರಸ್ತುತ ಪಡಿಸಿತು. ಮುದ್ರಾಡಿ ಗ್ರಾ.ಪಂ. ಯಕ್ಷಗಾನ ಹಾಗೂ ಆಟಿಕಳಂಜ ಸಂಸ್ಕೃತಿಯನ್ನು ಪ್ರತಿಬಿಂಬಿಸಿದರೆ, ಕುತ್ಯಾರು ತಂಡ ದೇಶದ ರಕ್ಷಣೆಯ ಸೈನಿಕರ ಗಾಂಭೀರ್ಯವನ್ನು ಪ್ರದರ್ಶಿಸಿದರು. ಕಾರ್ಕಳ ಕುಕ್ಕುಂದೂರು ತಂಡ ಕೃಷಿ ಸಂಸ್ಕೃತಿಯನ್ನು ಬಿಂಬಿಸಿಕೊಂಡು ಕರಾವಳಿಯ ಜಾನಪದ ಕ್ರೀಡೆಗಳಲ್ಲಿ ಒಂದಾಗಿರುವ ಕೋಳಿ ಅಂಕದ ಪ್ರದರ್ಶನವನ್ನು ವೇದಿಕೆ ಎದುರು ತೋರ್ಪಡಿಸಿದರು. ಬೆಳ್ತಂಗಡಿ ನಾರಾವಿಯ ತಂಡ ಶೋಷಣೆ ಮುಕ್ತ ಬದುಕನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ರವರ ಸ್ತಬ್ಧಚಿತ್ರದ ಮೂಲಕ ಗಮನ ಸೆಳೆಯಿತು.
ಉಳಿದಂತೆ ಅಮ್ಮುಂಜೆ, ಅರಂತೋಡು, ಸಂಪಾಜೆ, ಸಾಲಿಗ್ರಾಮ ಪಟ್ಟಣ ಪಂ., ಹೆಜಮಾಡಿ, ಮುದ್ರಾಡಿ, ಕೆರಾಡಿ, ಗಂಗೊಳ್ಳಿ, ಬೈಂದೂರು, ಹೊಂಬಾಡಿ- ಮಂಡಾಡಿ, ತೆಂಕ, ತೆಕ್ಕಟ್ಟೆ, ಜಾಲ್ಸೂರು, ಕೆಮ್ಮಣ್ಣು, ಕಾಲಾವರ, ಅರೆಹಳ್ಲಿ, ಬಾರ್ಕೂರು, 34 ನೆಕ್ಕಿಲಾಡಿ, ಬನ್ನೂರು, ಕೊಡೆಂಬಾಡಿ, ಆರ್ಯಾಪು, ಉಚ್ಚಿಲ, ಕೋಟೆತಟ್ಟು ಮೊದಲಾದ ತಂಡಗಳು ಆಕರ್ಷಣೆ ಪಥ ಸಂಚಲನೆಯ ಮೂಲಕ ಅತಿಥಿಗಳಿಗೆ ಗೌರವ ವಂದನೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯ ತಂಡದಿಂದ ನೃತ್ಯ, ಕೋಲಾಟ, ಪೂಜಾಕುಣಿತ, ವೀರಗಾಸೆ, ಹುಲಿಕುಣಿತ, ಮಹಿಷಾಸುರಮರ್ಧಿನಿ ಪ್ರಾತ್ಯಕ್ಷಿಕೆಯೊಂದಿಗೆ ವೈವಿಧ್ಯತೆಯನ್ನು ಪ್ರದರ್ಶಿಸುವ ಜತೆಗೆ ಪೌರ ಕಾರ್ಮಿಕರು ಪಥ ಸಂಚನಲ ದಲ್ಲಿ ಹೆಜ್ಜೆ ಹಾಕಿದರು. ಸಹ್ಯಾದ್ರಿ ಕಾಲೇಜಿನ ಹಿಂಬದಿಯ ನೇತ್ರಾವತಿ ನದಿಯ ತಟದಲ್ಲಿ ಪ್ರಾಕೃತಿಕ ರಮಣೀಯ ವಿಶಾಲವಾದ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.







