ಮಂಗಳೂರು ; ಸಂತ ಆಗ್ನೇಸ್ ಕಾಲೇಜು ವಾರ್ಷಿಕೋತ್ಸವ

ಮಂಗಳೂರು: ನಗರದ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿರುವ ಸಂತ ಆಗ್ನೇಸ್ ಕಾಲೇಜು ಹಿಂದಿನಿಂದಲೂ ತನ್ನ ಸಂಪ್ರದಾ ಯವನ್ನು ಉಳಿಸಿಕೊಂಡು ಬಂದಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಶಿಸ್ತಿಗೂ ಪ್ರಾಮುಖ್ಯತೆ ಕೊಡುತ್ತಾರೆ. ಮೌಲ್ಯಾಧಾರಿತ ಶಿಕ್ಷಣ ಈ ಸಂಸ್ಥೆಯ ಹೆಮ್ಮೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಂತ ಆಗ್ನೇಸ್ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾನು ಸ್ನಾತಕೋತ್ತರ ಪದವಿ ಕಲಿಯುವಾಗ ಯಾವ ವಿದ್ಯಾರ್ಥಿಗಳಲ್ಲಿ ಕೇಳಿದರೂ ಎಲ್ಲರ ಕನಸು ತಾನು ಒಮ್ಮೆಯಾ ದರೂ ಸಂತ ಆಗ್ನೇಸ್ ಕಾಲೇಜು ಕ್ಯಾಂಪಸ್ ನೋಡಬೇಕು, ಅಲ್ಲಿ ತಾನು ಕಲಿಯಬೇಕು ನ್ನುದಾಗಿತ್ತು. ಇದಕ್ಕೆ ಇಲ್ಲಿನ ವಾತಾವರಣ, ಶಿಸ್ತುಬದ್ಧ ಕಲಿಕೆಯೇ ಕಾರಣ ಎಂದು ಹೇಳಿದರು.
‘ವಿವಿಧತೆಯಲ್ಲಿ ಏಕತೆ’ ಎಂಬ ಧ್ಯೇಯದೊಂದಿಗೆ ನಡೆದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗಳಿಸಿವೆ, ಮುಂದೆಯೂ ಈ ಕಾಲೇಜು ತನ್ನ ಮೌಲ್ಯಗಳೊಂದಿಗೆ ಹೆಸರು ಗಳಿಸಲಿ ಎಂದು ಅವರು ಹಾರೈಸಿದರು.
ಸಂತ ಆಗ್ನೇಸ್ ಶಿಕ್ಷಣ ಸಂಸ್ಥೆಗಳ ಜತೆ ಕಾರ್ಯದರ್ಶಿ ಸಿ. ಡಾ. ಮರಿಯಾ ಎ.ಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಸಿ. ಡಾ. ಎಂ. ವೆನಿಸ್ಸಾ ಎ.ಸಿ ಉಪಪ್ರಾಂಶುಪಾಲೆ ಸಿ.ಡಾ. ಮರಿಯಾ ರೂಪ ಎ.ಸಿ., ಕ್ಯಾಂಪಸ್ ಆಡಳಿತಾಧಿಕಾರಿ ಸಿ. ಕಾರ್ಮೆಲ್ ರಿಟಾ ಎ. ಸಿ, ಪಿ. ಜಿ. ಸಂಯೋಜಕಿ ಸಿ. ಡಾ. ವಿನೋರಾ ಎ. ಸಿ, ಸಂಯೋಜಕರಾದ ಡಾ. ದೇವಿ ಪ್ರಭಾ ಆಳ್ವ ಮತ್ತು ಡಾ. ಕಾವ್ಯ ಶ್ರೀ ಉಪಸ್ಥಿತರಿದ್ದರು.
ಮನಶಾಸ್ತ್ರ ವಿಭಾಗದ ಪ್ರೊ.ವಿನಿತಾ ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಪ್ರೊ. ಗೀತಾಂಜಲಿ ವಂದಿಸಿದರು. ಪ್ರೀವಿ ಡಿ ಸೋಜ ಹಾಗೂ ಪ್ರತೀಕ್ ಬಿ ರೈ ಕಾರ್ಯಕ್ರಮ ನಿರೂಪಿಸಿದರು.







