ನಿರಂಜನ ಕೃತಿಗಳಲ್ಲಿ ಮಾರ್ಕ್ಸ್‌ವಾದ, ಗಾಂಧಿ ತತ್ವ , ನೆಹರೂ ಚಿಂತನೆಗಳು ಅಂತರ್ಗತ: ಡಾ.ಪುರುಷೋತ್ತಮ ಬಿಳಿಮಲೆ

ಮಂಗಳೂರು, ಫೆ.22: ನಿರಂಜನ ಸೇರಿದಂತೆ ಏಳೆಂಟು ಹೆಸರುಗಳಿಂದ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿದ್ದ ಕುಲ್ಕುಂದ ಶಿವರಾಯರು ಅವರದ್ದು ಸೈದ್ಧಾಂತಿಕ ವಿಚಿತ್ರವಾಗಿತ್ತು. ಒಂದು ರೀತಿಯಲ್ಲಿ ಅದೊಂದು ಮಿಶ್ರಣವಾಗಿತ್ತು. ನಿರಂಜನ ಸೇರಿ ದಂತೆ ಪ್ರಗತಿಶೀಲ ಕಾಲಘಟ್ಟದ ಸಾಹಿತಿಗಳು ಮಾರ್ಕ್ಸ್‌ವಾದಿಗಳಾಗಿದ್ದರು. ಹೀಗಾಗಿ ನಿರಂಜನ ಕೃತಿಗಳಲ್ಲಿ ಮಾರ್ಕ್ಸ್ ವಾದ, ಗಾಂಧಿ ತತ್ವ ಮತ್ತು ನೆಹರೂ ಚಿಂತನೆಗಳು ಅಂತರ್ಗತವಾಗಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಶನಿವಾರ ತುಳು ಭವನದಲ್ಲಿ ಆಯೋಜಿಸಲಾದ ಸಾಹಿತಿ ನಿರಂಜನ 100 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂಜನರ ಹುಟ್ಟೂರು ಸುಬ್ರಹ್ಮಣ್ಯದ ಸಮೀಪದ ಕುಲ್ಕುಂದದಲ್ಲಿ. ಆದರೆ ವೈಯುಕ್ತಿಕವಾಗಿ ಭಾವಜೀವಿ. ಆದರೆ ಅವರ ಒಟ್ಟು ಸಾಹಿತ್ಯದಲ್ಲಿ ಜಮೀನ್ದಾರರು, ಪ್ರಭುತ್ವ, ವಸಾಹತುಗಳ ವಿರುದ್ಧ ಧ್ವನಿ ಎತ್ತಿರುವುದು ಗಮನಾರ್ಹ. ಅವರ ಆಶಯ ಗಳು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ’ ಎಂದು ಅವರು ಹೇಳಿದರು.
ಪ್ರಗತಿಶೀಲ ಸಾಹಿತ್ಯ ಪ್ರಕಾರದಲ್ಲಿ ಚದುರಂಗ ಹಾಗೂ ನಿರಂಜನರು ಗಟ್ಟಿಯಾಗಿ ನೆಲೆವೂರಿದ್ದಾರೆ. 62 ಸೃಜನಶೀಲ ಹಾಗೂ 20 ಸಂಪಾದಿತ ಸೇರಿದಂತೆ ಒಟ್ಟು 82 ಕೃತಿಗಳನ್ನು ನಿರಂಜನರು ರಚಿಸಿದ್ದಾರೆ ಎಂದು ಅವರು ವಿವರಿಸಿದರು.
ವಿಚಾರಶೀಲತೆ ಅವರಲ್ಲಿ ಪ್ರಕರವಾಗಿತ್ತು. ಈ ಕಾರಣದಿಂದಾಗಿ ಅವರು ಪದ್ಯ ಬರೆಯಲಿಲ್ಲ. ಆದರೆ ಅವರ ಬದುಕು ಪದ್ಯದ ಹಾಗೆ ಇತ್ತು. ಮಹಿಳಾ ಪರ ಲೇಖನಗಳು ಹೆಚ್ಚು ಬರೆದಿದ್ದ ನಿರಂಜನರು ಪ್ರೇಮ ಪತ್ರದಲ್ಲೂ ಸಾಮಾಜಿಕ ಬದ್ಧತೆಯನ್ನು ತಿಳಿಸಿದ್ದರು. ಅವರ ಎಲ್ಲ ಕಥೆಗಳು ಮಹಿಳಾ ಪ್ರಧಾನವಾಗಿದ್ದು ಮಹಿಳೆಯೇ ಅವುಗಳ ಕೇಂದ್ರಬಿಂದು ಆಗಿದ್ದವು ಎಂದು ಡಾ.ಪುರುಷೋತ್ತಮ ಬಿಳಿಮಲೆ ಬಣ್ಣಿಸಿದರು.
‘ನಿರಂಜನ ಅವರ ಪ್ರೇಮಪತ್ರಗಳು ಕೂಡ ಸಾಮಾನ್ಯ ವಿಷಯಗಳನ್ನು ಒಳಗೊಂಡು ಪೇಲವವಾಗಿರಲಿಲ್ಲ. ಸಮಕಾಲೀನ ವಿಷಯಗಳಿಗೆ ಕನ್ನಡಿ ಹಿಡಿದಂತೆ ಇತ್ತು. ಅವರು ಕಾವ್ಯ ರಚನೆಯಲ್ಲಿ ತೊಡಗಿಸಿಕೊಳ್ಳದ ಕೊರತೆಯನ್ನು ಪ್ರೇಮಪತ್ರಗಳು ನಿವಾರಿಸಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ನಿರಂಜನರ ಬದುಕು-ಬರಹವನ್ನು ಪರಿಚಯಿಸುವ ಉದ್ದೇಶದಿಂದ ನಿರಂಜನ 100 ಕಾರ್ಯಕ್ರಮ ಆಯೋಜಿಸಲಾಗಿದೆ. ನಿರಂಜನರ ಸಾಹಿತ್ಯ ನಮ್ಮಿಂದ ಕಣ್ಣರೆಯಾಗಿದಂತಿದೆ. ಅವುಗಳನ್ನು ಹುಡುಕಿ ಪುನರ್ ಮುದ್ರಣ ಮಾಡುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಪೂರ್ಣಿಮಾ ವಂದಿಸಿದರು. ಸದಸ್ಯೆ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.







