ಕಮ್ಯುನಿಸ್ಟ್ ಪ್ರಣಾಳಿಕೆ ಸಮಾಜವನ್ನು ಬದಲಾಯಿಸುವ ವೈಜ್ಞಾನಿಕ ಪುಸ್ತಕ: ಸುಕುಮಾರ್ ತೊಕ್ಕೊಟ್ಟು

ಮಂಗಳುರು, ಫೆ.23: ಪ್ರಪಂಚದಲ್ಲಿ ಅತೀ ಹೆಚ್ಚು ಮುದ್ರಿತವಾಗಿರುವ ಪುಸ್ತಕಗಳ ಪೈಕಿ ಕಮ್ಯುನಿಸ್ಟ್ ಪ್ರಣಾಳಿಕೆ ಮೂರನೆಯ ಸ್ಥಾನವನ್ನು ಹೊಂದಿದೆ. ಕಾರ್ಲ್ ಮಾರ್ಕ್ಸ್ ಹಾಗೂ ಎಂಗೆಲ್ಸ್ ರವರ ಕಮ್ಯುನಿಸ್ಟ್ ಪ್ರಣಾಳಿಕೆ ಸಮಾಜವನ್ನು ಅಮೂಲಾಗ್ರವಾಗಿ ಬದಲಾಯಿಸುವ ವೈಜ್ಞಾನಿಕ ಪುಸ್ತಕವಾಗಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು ಅಭಿಪ್ರಾಯಪಟ್ಟರು.
ಅಂತರ್‌ರಾಷ್ಟ್ರೀಯ ಕೆಂಪು ಪುಸ್ತಕ ದಿನಾಚರಣೆಯ ಅಂಗವಾಗಿ ಸಿಪಿಎಂ ತೊಕ್ಕೊಟ್ಟು ಕಚೇರಿಯಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿಚಾರ ಮಂಡಿಸಿದರು.
ಕಮ್ಯುನಿಸ್ಟ್ ಪ್ರಣಾಳಿಕೆ ಪ್ರಕಟವಾದ ದಿನವಾದ 1848ರ ಫೆಬ್ರವರಿ 21ರಂದು ಪ್ರಕಟವಾಗಿತ್ತು. ಆ ದಿನವನ್ನು ಅಂತರ್ ರಾಷ್ಟ್ರೀಯ ಕೆಂಪು ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತಿದೆ.177 ವರ್ಷಗಳ ಹಿಂದೆ ಪ್ರಕಟವಾದ ಕಮ್ಯುನಿಸ್ಟ್ ಪ್ರಣಾ ಳಿಕೆಯು ಜ್ಯೋತಿಷ್ಯವೂ ಅಲ್ಲ, ಬ್ರಹ್ಮನ ಕಾಲಜ್ಞಾನವೂ ಅಲ್ಲ. ಅದು ಭವಿಷ್ಯದ ಸೂಚಕವಾಗಿದ್ದು, ಅದರಲ್ಲಿರುವ ಪ್ರತಿಯೊಂದು ಅಂಶಗಳೂ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಪ್ರತಿಕ್ರಿಯೆ ನೀಡಿದ ಪ್ರಗತಿಪರ ಚಿಂತಕ ರಮೇಶ್ ಉಳ್ಳಾಲ ಮಾತನಾಡಿ, ದುಡಿಯುವ ವರ್ಗದ ಕಲ್ಯಾಣ ರಾಜ್ಯ ಉದಯವಾಗುವುದು ಅನಿವಾರ್ಯ ಬೆಳವಣಿಗೆಯಾಗಿದೆ ಎಂದು ಮಾರ್ಕ್ಸ್ ಹೇಳಿದ್ದರು.
ಬಂಡವಾಳಶಾಹಿಗಳಿಗೆ ಕಾರ್ಲ್ ಮಾರ್ಕ್ಸ್, ಕಮ್ಯುನಿಸಂ, ದುಡಿಯುವ ವರ್ಗದ ಪ್ರಭುತ್ವ ಎಂದರೆ ಪರಮದ್ವೇಷ. ಅದಕ್ಕಾಗಿ ಈ ಬಂಡವಾಳದಾರರು ಜಾಗತಿಕ ಮಟ್ಟದಲ್ಲಿ ತನ್ನೆಲ್ಲ ಶಕ್ತಿಯನ್ನು ಕ್ರೋಢೀಕರಿಸಿ ಕಮ್ಯುನಿಸಂನ ವಿರುಧ್ಧ ಭಾರೀ ಅಪ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಕಮ್ಯುನಿಸ್ಟ್ ಪ್ರಣಾಳಿಕೆ ಕಮ್ಯುನಿಸ್ಟರಿಗೆ ಮಾತ್ರ ಒಂದು ದಾಖಲೆಯಲ್ಲ, ಬದಲಾವಣೆಯನ್ನು ಬಯಸುವ ಎಲ್ಲರಿಗೂ ಆಶಾ ದಾಯಕವಾದ ಮಹಾಕಾವ್ಯವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಿಂದ ಸೃಷ್ಠಿಯಾದ ಹಸಿವು ಬಡತನ ಅನಕ್ಷರತೆ ನಿರುದ್ಯೋಗ ಮುಂತಾದ ಅನಿಷ್ಠಗಳ ನಿವಾರಣೆಯ ಅತ್ಯುತ್ತಮ ಔಷಧವಾಗಿದೆ ಈ ಕಮ್ಯುನಿಸ್ಟ್ ಪ್ರಣಾಳಿಕೆ* ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಕಮ್ಯುನಿಸ್ಟ್ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ಸಿಪಿಎಂ ಹಿರಿಯ ಮುಖಂಡರಾದ ಸುಂದರ ಕುಂಪಲ, ಯು ಬಿ ನಾರಾಯಣ, ಅಒ ಉಳ್ಳಾಲ ವಲಯ ಸಮಿತಿ ಸದಸ್ಯರಾದ ರೋಹಿದಾಸ್ ಭಟ್ನಗರ, ಜನಾರ್ದನ ಕುತ್ತಾರ್, ಪ್ರಮೋದಿನಿ ಕಲ್ಲಾಪು, ವಿಲಾಸಿನಿ, ಇಬ್ರಾಹೀಂ ಮದಕ ಮುಂತಾದವರು ಉಪಸ್ಥಿತರಿದ್ದರು.







