ವಕ್ಫ್ ಮಸೂದೆ: ಸ್ಪೀಕರ್ ಯುಟಿ ಖಾದರ್ ನೇತೃತ್ವದಲ್ಲಿ ಸಚಿವರು, ಶಾಸಕರ ಸಭೆ

ಬೆಂಗಳೂರು: ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ ತರುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ಸಚಿವರು, ಶಾಸಕರು ರಾಜ್ಯ ಸರಕಾರದ ಕಾನೂನು ಇಲಾಖೆಯ ಕಾರ್ಯದರ್ಶಿ ಜೊತೆ ಸೋಮವಾರ ಚರ್ಚೆ ನಡೆಸಿದರು.
ವಕ್ಫ್ ಮಸೂದೆ ಸಂಸತ್ತಿನಲ್ಲಿ ಪಾಸಾದರೆ ಆ ಬಗ್ಗೆ ಕಾನೂನು ವ್ಯಾಪ್ತಿಯಲ್ಲಿ ರಾಜ್ಯ ಸರಕಾರ ಏನೇನು ಮಾಡಬಹುದು ಹಾಗು ಸರಕಾರಕ್ಕೆ ಇರುವ ಕಾನೂನು ಅವಕಾಶಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಕಾನೂನು ಇಲಾಖೆ ಕಾರ್ಯದರ್ಶಿಗೆ ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ವಿವರ ತಿಳಿಸುವಂತೆ ಸೂಚಿಸಲಾಯಿತು.
ಈ ಹಿಂದೆ ವಕ್ಫ್ ಸಂಬಂಧಿತ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಾಗಿದ್ದ, ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಕೆ. ರಹ್ಮಾನ್ ಖಾನ್ ಅವರ ಜೊತೆ ಇನ್ನೊಂದು ಸುತ್ತಿನ ಸಭೆ ನಡೆಸುವುದಾಗಿ ನಿರ್ಧರಿಸಲಾಯಿತು.
ಶೀಘ್ರ ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಪ್ರಮುಖ ಮುಸ್ಲಿಂ ಉಲೇಮಾಗಳು, ಧಾರ್ಮಿಕ ಸಂಘ ಸಂಸ್ಥೆಗಳ ಮುಖಂಡರ ಸಭೆಯನ್ನು ಕರೆಯಲು ಹಾಗು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಜೊತೆ ಈ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭ ಸಚಿವರಾದ ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ರಿಝ್ವಾನ್ ಅರ್ಷದ್ ಮತ್ತಿತರರು ಉಪಸ್ಥಿತರಿದ್ದರು.