ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ: ಕೆಎಸ್‌ಎನ್‌ಡಿಎಂಸಿ ಎಚ್ಚರಿಕೆ
ಸುಳ್ಯ, ಪುತ್ತೂರಿನಲ್ಲಿ ತಾಪಮಾನ 40.4 ಡಿಗ್ರಿ ಸೆಲ್ಸಿಯಸ್ ಏರಿಕೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ವಾತಾವರಣದಲ್ಲಿ ಬಿಸಿ ಗಾಳಿ ತೀವ್ರ ಗೊಳ್ಳುವ ಸಾಧ್ಯತೆ ಇದ್ದು, ನಂತರದ ದಿನಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮುನ್ಸೂಚನೆ ನೀಡಿದೆ.
ದ.ಕ. ಜಿಲ್ಲೆಯಲ್ಲಿ ಬೇಸಿಗೆಯ ಉರಿಬಿಸಿಲು, ಬಿಸಿ ಗಾಳಿ ಮುಂದುವರಿದಿದ್ದು, ಜಿಲ್ಲೆಯ 4 ಸ್ಥಳಗಳಲ್ಲಿ ಗುರುವಾರ ವಾತಾವರಣದ ತಾಪಮಾನ 39.3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗಿದೆ.
ಸುಳ್ಯ ಮತ್ತು ಪುತ್ತೂರಿನಲ್ಲಿ ವಾತಾವರಣದ ತಾಪಮಾನ 40.4 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಪಾಣೆ ಮಂಗಳೂರು 39.6 ಡಿಗ್ರಿ ಸೆಲ್ಸಿಯಸ್, ಉಪ್ಪಿನಂಗಡಿ 39.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿವೆ.
ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಂತವಾಡ ಹೋಬಳಿಯಲ್ಲಿ ರಾಜ್ಯದಲ್ಲೇ ಗರಿಷ್ಠ ಅಂದರೆ 41.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕೆಎಸ್‌ಎನ್‌ಡಿಎಂಸಿ ಹವಾಮಾನ ಜಾಲದ ಪ್ರಕಾರ ಉತ್ತರ ಕನ್ನಡ ಜಿಲ್ಲೆ 9 ಸ್ಥಳಗಳು, ದ.ಕ. ಜಿಲ್ಲೆಯ 4 ಸ್ಥಳಗಳು , ಉಡುಪಿಯ 4 ಸ್ಥಳಗಳಲ್ಲಿ 39 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿವೆ.
ಬಿಸಿ ಗಾಳಿ ಪರಿಸ್ಥಿತಿಯು ಕರಾವಳಿ ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳ ಕಾಲ ಮುಂದುವರಿಯುವ ಸಂಭವ ಇದೆ. ಬಿಸಿ ಮತ್ತು ಆರ್ದ್ರತೆಯಿಂದ ಕೂಡಿರುವ ಪರಿಸ್ಥಿತಿಗಳು ಮುಂದಿನ 24 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನಗಳ ವರೆಗೆ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ. ಉತ್ತರ ಒಳನಾಡಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ನಂತರದ 3 ದಿನಗಳವರೆಗೆ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಸಾಧ್ಯತೆ ಇದೆ ಎಂದು ಐಎಂಡಿ ಮೂಲಗಳು ತಿಳಿಸಿವೆ.







