ಅಕ್ರಮ ಮರಳುಗಾರಿಕೆ ಆರೋಪ: ಇಬ್ಬರ ಸೆರೆ

ಮಂಗಳೂರು, ಫೆ. 27: ಕಾವೂರು ಠಾಣಾ ವ್ಯಾಪ್ತಿಯ ಮಂಜಲ್‌ಪಾದೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಲಾರಾ ಡಿಸೋಜಾ (28) ಮತ್ತು ತಿಯಾದೋರ್ ಡಿಸೋಜಾ (56) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಬುಧವಾರ ರಾತ್ರಿ 10:45ಕ್ಕೆ ಪೊಲೀಸರು ದಾಳಿ ನಡೆಸಿದಾಗ ಮರಳು ತುಂಬಿದ ಎರಡು ಲಾರಿ ಕಂಡು ಬಂದಿದೆ. ತಕ್ಷಣ ಒಂದು ಲಾರಿಯನ್ನು ಚಾಲಕ ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ನದಿಯಿಂದ ಮರಳು ತೆಗೆಯುತ್ತಿದ್ದವರು ಅಲ್ಲಿಂದ ಓಡಿ ಹೋಗಿದ್ದು, ಆ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಮರಳಿನಿಂದ ಅಕ್ರಮವಾಗಿ ತೆಗೆದು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story