ಹಕ್ಕಿ ಜ್ವರದ ಕುರಿತು ಸಮನ್ವಯ ಸಮಿತಿಯ ಸಭೆ: ಡಿಎಚ್‌ಒ

ಮಂಗಳೂರು, ಫೆ. 28: ಹೊರರಾಜ್ಯಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಹಕ್ಕಿಜ್ವರ ರಾಜ್ಯದ ಬಳ್ಳಾರಿ, ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಶು ಇಲಾಖೆ ಹಾಗೂ ಆರೋಗ್ಯ ಇಲಾಖೆ ಜತೆ ದ.ಕ. ಜಿಲ್ಲೆಯಲ್ಲಿ ಸಮನ್ವಯ ಸಮಿತಿ ಸಭೆ ಮಾ.1ರಂದು ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದರು.
ಅವರು ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿ, ಸಭೆಯ ಬಳಿಕ ಈ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಈ ವರೆಗೆ ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರದ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತೆ ಕಟ್ಟೇಚ್ಚರವನ್ನು ಕೈಗೊಳ್ಳಲು ಇಲಾಖೆ ಸಿದ್ಧತೆಯನ್ನು ಮಾಡಿಕೊಂಡಿದೆ. ಮಾಂಸ ಪ್ರಿಯರು ಮಾಂಸವನ್ನು ಅದಷ್ಟು ಉತ್ತಮವಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಕಾಯಿಲೆಗಳು ಕಾಣಿಸಿಕೊಳ್ಳುವುದಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದೆ ಎಂದರು.
ಹೀಟ್‌ವೇವ್ ಎಚ್ಚರ ಇರಲಿ
ವಾತಾವರಣದಲ್ಲಿ ಬಿಸಿಗಾಳಿಯ ಮಟ್ಟ ಏರಿಕೆಯಾಗಿರುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ. ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಜತೆಯಲ್ಲಿ ವಿಶೇಷ ಸಭೆಯನ್ನು ನಡೆಸಲು ಚಿಂತನೆ ನಡೆಸಲಾಗಿದೆ. ಈ ಸಮಯದಲ್ಲಿ ಮಕ್ಕಳಲ್ಲಿ ವಿಶೇಷವಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಐಪಿಎ, ಐಎಂಎಯ ಜತೆಗೂ ವಿಶೇಷ ಸಭೆ ನಡೆಸುತ್ತೇವೆ. ಇದರ ಜತೆಯಲ್ಲಿ ಡಿಡಿಪಿಐ, ಡಿಡಿಪಿಯುಗಳಿಗೂ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಯ ಕುರಿತು ಹೆತ್ತವರು ಹೆಚ್ಚು ಜಾಗೃತಿ, ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಆದಷ್ಟೂ ಹೆಚ್ಚು ನೀರಿನಾಂಶ ಇರುವ ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಕಾರ್ಬೊಹೈಡ್ರೇಡ್ ಇರುವ ತಂಪು ಪಾನೀಯಗಳನ್ನು ಕುಡಿಯಲು ಹೋಗಬೇಡಿ. ಇದರಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ ಇದರಿಂದ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದರು.
ಮಂಗನಕಾಯಿಲೆ ಎಚ್ಚರಿಕೆ ಇರಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಮಂಗನಕಾಯಿಲೆ ಪ್ರಕರಣವೊಂದು ಕಾಣಿಸಿಕೊಂಡಿತ್ತು. ಆದರೆ ಹೊರ ಜಿಲ್ಲೆಯಲ್ಲಿ ಪ್ರಕರಣಗಳು ಇದ್ದು ಚಿಕಿತ್ಸೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಮಂದಿ ಹೆಚ್ಚುತ್ತಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಒಂದೆರಡು ಉಡುಪಿ ಕಡೆಯ ಪ್ರಕರಣಗಳು ಜಿಲ್ಲೆಗೆ ಬಂದಿತ್ತು. ವಿಶೇಷ ಎಂದರೆ ನಮ್ಮಲ್ಲಿ ಚಿಕಿತ್ಸೆಯಿದೆ ಆದರೆ ಇಂತಹ ಕಾಯಿಲೆಯ ಮಾದರಿಯನ್ನು ಶಿವಮೊಗ್ಗದ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸುವುದರಿಂದ ಫಲಿತಾಂಶ ಪಡೆಯಲು ಒಂದೆರಡು ದಿನಗಳು ಕಾಯಬೇಕಾಗುತ್ತದೆ. ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಗನಕಾಯಿಲೆಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾಹಿತಿ ನೀಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜೆಸಿಂತಾ, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೇಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾರ‌್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಉಪಸ್ಥಿತರಿದ್ದರು.







