ಮುಲ್ಕಿ- ತಲಪಾಡಿ ರಾಷ್ಟ್ರೀಯ ಹೆದ್ದಾರಿ| ಮಳೆಗಾಲದ ಬಳಿಕ ನಾಲ್ಕು ಕಡೆ ಸರ್ವಿಸ್ ರಸ್ತೆಗಳ ನಿರ್ಮಾಣಕ್ಕೆ ಸಿದ್ಧತೆ

ಮಂಗಳೂರು, ಮಾ.1: ಮುಲ್ಕಿಯಿಂದ ತಲಪಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ನಾಲ್ಕು ಕಡೆ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲು ಅಗತ್ಯ ಪ್ರಕ್ರಿಯಗಳನ್ನು ನಡೆಸಲಾಗಿದ್ದು, ಮಳೆಗಾಲದ ಬಳಿಕ ಕಾಮಗಾರಿ ಆರಂಭಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧಿಕಾರಿಗಳು ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬ್ರಿಜೇಶ್ ಚೌಟರವರು, ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಗಳ ನಿರ್ಮಾಣದ ಬಗ್ಗೆ ವಿಚಾರಿಸಿದಾಗ, ಪ್ರತಿಕ್ರಿಯಿಸಿದ ಎನ್‌ಎಚ್‌ಎಐನ ಯೋಜನಾ ಅಧಿಕಾರಿ ಅಬ್ದುಲ್ಲಾ ಜಾವೇದ್ ಅಝ್ಮಿ ಈ ಪ್ರತಿಕ್ರಿಯೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ, ಪಡುಪಣಂಬೂರು, ಹಳೆಯಂಗಡಿ ಮತ್ತು ಬೀರಿಯಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸ ಲಾಗುತ್ತಿದೆ. ಮುಲ್ಕಿಯ ಬಪ್ಪನಾಡುವಿನಲ್ಲಿ 500 ಮೀಟರ್, ಪಡುಪಣಂಬೂರಿನಲ್ಲಿ 380 ಮೀಟರ್, ಹಳೆಯಂಗಡಿಯಲ್ಲಿ 550 ಮೀಟರ್ ಹಾಗೂ ಬೀರಿಯಲ್ಲಿ 700 ಮೀಟರ್ ಉದ್ದದ ಸರ್ವಿಸ್ ರಸ್ತೆಗಳಿಗೆ ಬಿಡ್ಡಿಂಗ್ ಪ್ರಕ್ರಿಯೆ ನಡೆದು ಏಜೆನ್ಸಿ ಗಳನ್ನು ನಿಗದಿಪಡಿಸಲಾಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಅಬ್ದುಲ್ಲಾ ಜಾವೇದ್ ಅಝ್ಮಿ ತಿಳಿಸಿದರು.
ಎಪ್ರಿಲ್‌ನಿಂದ ಕಲ್ಲಡ್ಕ ಮೇಲ್ಸೇತುವೆಯಲ್ಲಿ ಸಂಚಾರ ಅನುಮತಿ
ಅಡ್ಡಹೊಳೆಯಿಂದ ಬಿಸಿರೋಡ್ ನಡುವಿನ ಚತುಷ್ಪಥ ಕಾಮಗಾರಿಯ ನಾಲ್ಕು ಪ್ಯಾಕೇಜ್‌ಗಳಲ್ಲಿ ಪ್ಯಾಕೇಜ್ 1ರ (ಅಡ್ಡಹೊಳೆಯಿಂದ ಪೆರಿಯಶಾಂತಿ) ಶೇ. 95.4ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪ್ಯಾಕೇಜ್ 2ರ ಪೆರಿಯ ಶಾಂತಿಯಿಂದ ಬಿಸಿರೋಡ್‌ವರೆಗಿನ ಶೇ. 73ರಷ್ಟು ಕಾಮಗಾರಿ ಪೂರ್ಣವಾಗಿದೆ. ಕಲ್ಲಡ್ಕ ಮೇಲ್ಸೇತುವೆ ಕಾಮಗಾರಿ ಪೂರ್ಣ ಗೊಂಡ್ದಿು, ಅಂತಿಮ ಕಾಮಗಾರಿಗಳು, ಸಂಪರ್ಕ ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಎಪ್ರಿಲ್‌ನಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅಬ್ದುಲ್ಲಾ ಜಾವೇದ್ ಸಭೆಗೆ ತಿಳಿಸಿದರು.
ಮುಂದಿನ ವಾರದಿಂದ ಪಂಪ್‌ವೆಲ್-ಗೋರಿಗುಡ್ಡೆ ಸರ್ವಿಸ್ ರಸ್ತೆ ವಿಸ್ತರಣೆ ಕಾಮಗಾರಿ
ಪಂಪ್‌ವೆಲ್‌ನಿಂದ ಗೋರಿಗುಡ್ಡ ಹೋಗುವ ಇಕ್ಕೆಲಗಳ ಸರ್ವಿಸ್ ರಸ್ತೆಯ ಅಗಲೀಕರಣ, ಒಳಚರಂಡಿ, ಫುಟಪಾತ್ ಕಾಮಗಾರಿಯು 4 ಕೋಟಿ ರೂ. ವೆಚ್ಚದಲ್ಲಿ ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಚರ್ಚೆಯ ವೇಳೆ ಸಭೆಗೆ ಮಾಹಿತಿ ನೀಡಿದರು.
ಹೆಜಮಾಡಿಯಲ್ಲಿ ಸ್ಥಳೀಯರಿಗೆ ಟೋಲ್ ಮುಕ್ತಗೊಳಿಸಿ
ಉಡುಪಿಯಲ್ಲಿ ಈಗಾಗಲೇ ಸ್ಥಳೀಯರಿಗೆ ಟೋಲ್ ಮುಕ್ತಗೊಳಿಸುವ ಕಾರ್ಯ ನಡೆದಿದ್ದು, ಹೆಜಮಾಡಿ ಟೋಲ್‌ನಲ್ಲಿಯೂ ಹೆಜಮಾಡಿ ಗ್ರಾ.ಪಂ. ಹಾಗೂ ಮುಲ್ಕಿ ನಗರ ಪಂಚಾಯತ್ ನಿವಾಸಿಗಳಿಗೆ ಟೋಲ್ ಮುಕ್ತಗೊಳಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಒತ್ತಾಯಿಸಿದರು.
ಸ್ಥಳೀಯರಿಗೆ ಪಾಸ್ ವ್ಯವಸ್ಥೆ ಮೂಲಕ ಟೋಲ್ ದರವನ್ನು ಕಡಿತಮಾಡಲಾಗಿದೆ ಎಂದು ಎನ್‌ಎಚ್‌ಎಐ ಅದಿಕಾರಿಗಳು ತಿಳಿಸಿದಾಗ, ಈ ಜಿಲ್ಲಾಧಿಕಾರಿ ಸಂಬಂಧಪಟ್ಟವರ ಸಭೆ ಕರೆದು ತೀರ್ಮಾನಿಸಿ ಎಂದು ಸಂಸದ ಬ್ರಿಜೇಶ್ ಚೌಟ ಸಲಹೆ ನೀಡಿದರು.
ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಹೆಚ್ಚಿಸಲು ಒತ್ತಾಯ
ಫರಂಗಿಪೇಟೆಯ ಕಾಲೇಜು ವಿದ್ಯಾರ್ಥಿ ನಾಪತ್ತೆ ಪ್ರಕರಣ ಐದು ದಿನಗಳಾದರೂ ಪತ್ತೆಯಾಗದಿರುವುದು ಗಂಭೀರ ವಿಚಾರ ವಾಗಿದೆ. ಇದು ಪೋಷಕರಿಗೆ ಜತೆಗೆ ಜನರ ಆತಂಕಕ್ಕೂ ಕಾರಣವಾಗಿದೆ. ಶನಿವಾರ ಪರಂಗಿಪೇಟೆಯಲ್ಲಿ ಜಾತಿ ಮತ ಬೇಧವಿಲ್ಲದೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಗೆ ಸಹಕರಿಸಿದ್ದಾರೆ. ಬಾಲಕನ ಪತ್ತೆಗೆ ಗಂಭೀರ ಪ್ರಯತ್ನದ ಜತೆಗೆ ಪೊಲೀಸ್ ಇಲಾಖೆ ಪ್ರತಿ ಕಾಲೇಜುಗಳಲ್ಲಿಯೂ ಪ್ರವೇಶದ ಸಂದರ್ಭ ಮಾದಕ ದ್ರವ್ಯ ಸೇವನೆ ಕುರಿತಂತೆ ಪರೀಕ್ಷೆ ನಡೆಸುವ ಮೂಲಕ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿಯನ್ನು ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಒತ್ತಾಯಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ವಿರುದ್ಧ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಕಾಲೇಜು ಆಡಳಿತ ಮಂಡಳಿಗೆ ಸಂಶಯ ಇರುವ ವಿದ್ಯಾರ್ಥಿಗಳ ತಪಾಸಣೆ ನಡೆಸುವ ಕಾರ್ಯವೂ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಿದ್ಧಾರ್ಥ್ ಗೋಯಲ್ ಹೇಳಿದರು.
ಸಭೆಯಲ್ಲಿ ಶಾಸಕರಾದ ಭಾಗೀರಥಿ, ವೇದವ್ಯಾಸಕಾಮತ್, ಜಿ.ಪಂ. ಸಿಇಒ ಡಾ. ಆನಂದ್, ಜಿಲ್ಲಾ ಅರಣ್ಯ ಉಪ ಸಂಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಉಪಸ್ಥಿತರಿದ್ದರು.
ವಿದ್ಯುತ್ ಉಪಕರಣಗಳಿಗೂ ಶಾಖಾಘಾತದ ಆತಂಕ!
ದ.ಕ. ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಆಗಾಗ್ಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮೆಸ್ಕಾಂ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆಯೇ, ಈ ವಿದ್ಯುತ್ ಕಡಿತ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.
ಮೆಸ್ಕಾಂ ಹಿರಿಯ ಅಧಿಕಾರಿ ರವಿಕಾಂತ್ ಪ್ರತಿಕ್ರಿಯಿಸಿ, ಕಳೆದ ಕೆಲ ದಿನಗಳಿಂದ ದ.ಕ. ಜಿಲ್ಲೆಯಲ್ಲಿಯೂ ಬಿಸಿಗಾಳಿಯು ತೀವ್ರವಾಗಿದೆ. ಇದರಿಂದ ವಿದ್ಯುತ್ ಉಪಕರಣಗಳೂ ಶಾಖಾಘಾತಕ್ಕೆ ಒಳಗಾಗಿ ತೊಂದರೆಯಾಗುವ ಆತಂಕ ಎದುರಾಗಿದ್ದು, ಅವುಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತ ಆಗುತ್ತಿದ್ದು, ಈ ಸಮಸ್ಯೆ ಬಗೆಹರಿಯಲಿದೆ ಎಂದರು.
ನೆಟ್ಟಣದಿಂದ ಸುಬ್ರಹ್ಮಣ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್ ಓಡಿಸಲು ಸೂಚನೆ
ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ರೈಲನ್ನು ಸುಬ್ರಹ್ಮಣ್ಯ ರೋಡ್‌ಗೆ ವಿಸ್ತರಿಸಲಾಗಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೆಟ್ಟಣದಿಂದ ಸುಬ್ರಹ್ಮಣ್ಯ ಕ್ಷೇತ್ರದವರೆಗೆ ಬಸ್ಸು ಓಡಿಸುವಂತೆ ಸಂಸದ ಬ್ರಿಜೇಶ್ ಚೌಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಖಂಡೇವು ನದಿ ನೀರು ಕಲುಷಿತ: ಕ್ರಮಕ್ಕೆ ಒತ್ತಾಯ
ಇತಿಹಾಸ ಪ್ರಸಿದ್ಧ ಖಂಡೇವು ನಂದಿನಿ ನದಿಗೆ ಸಮೀಪದ ಮೆಡಿಕಲ್ ಕಾಲೇಜು ಹಾಗೂ ಪಾಲಿಕೆಯ ಚೇಳ್ಯಾರು ತ್ಯಾಜ್ಯ ಘಟಕದಿಂದ ಒಳಚರಂಡಿ ನೀರು ಸೇರುತ್ತಿದ್ದು, ನೀರು ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರ ವಿರುದ್ಧ ಸ್ಥಳೀಯರು ಮಾ. 4ರಂದು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಸಭೆಯಲ್ಲಿ ಆಗ್ರಹಿಸಿದರು.
ನದಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನದಿ ಕಲುಷಿತಗೊಂಡ ಕಾರಣ ಇಲ್ಲಿ ಹಿಂದಿನಿಂದಲೂ ನದಿಗೆ ಇಳಿದು ಮೀನು ಹಿಡಿಯುವ ಸಂಪ್ರದಾಯವನ್ನು ಕಳೆದ ಕೆಲ ವರ್ಷಗಳಿಂದ ಮಾಡಲಾಗುತ್ತಿಲ್ಲ. ಪರಿಸರ ಮಾಲಿನ್ಯ ನಿಯಂತ್ರಮ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ ಕ್ರಮವಾಗಿಲ್ಲ ಎಂದು ಶಾಸಕರು ದೂರಿದರು.
ಮನಪಾ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಮನಪಾ ತ್ಯಾಜ್ಯ ಘಟಕದಿಂದ ಸಂಸ್ಕರಣೆ ಮಾಡಲಾದ ನೀರನ್ನು ಮಾತ್ರವೇ ಬಿಡಲಾಗುತ್ತಿದೆ. ಯಾವುದೇ ರೀತಿಯ ಉಲ್ಲಂಘನೆಯೂ ಮನಪಾದಿಂದ ಆಗಿಲ್ಲ ಎಂದರು.
ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ಅಪಾರ್ಟ್‌ಮೆಂಟ್‌ಗಳಿಂದ ತ್ಯಾಜ್ಯ ನೀರು ಬಿಡುತ್ತಿರುವುದು ಕಂಡು ಬಂದಿದೆ. ಮನಪಾ ಹಾಗೂ ಕಾಲೇಜಿನಿಂದ ಸಂಸ್ಕರಣೆ ನೀರು ಬಿಡಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಹೇಳಿದಾಗ, ಅಸಮಾಧಾನಗೊಂಡ ಶಾಸಕ ಉಮಾನಾಥ ಕೋಟ್ಯಾನ್, ನದಿ ನೋಡುವಾಗಲೇ ಅದು ಎಷ್ಟು ಪರಿಶುದ್ಧ ಎಂದು ತಿಳಿಯುತ್ತದೆ. ಶುದ್ಧವಾಗಿದ್ದರೆ ಒಂದು ಲೋಟ ನೀರನ್ನು ಕುಡಿದು ತೋರಿಸಿ ಎಂದು ಸವಾಲೆಸೆದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿ, ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಮನಪಾ ಅಧಿಕಾರಿಗಳು ಸೇರಿದಂತೆ ಎಸ್‌ಟಿಪಿ, ಕಾಲೇಜು ಹಾಗೂ ಅಪಾರ್ಟ್‌ಮೆಂಟ್‌ನಿಂದ ಬಿಡಲಾಗುವ ನೀರಿನ ಬಗ್ಗೆ ಜಂಟಿ ಪರಿಶೀಲನೆ ನಡೆಸಿ ತಕ್ಷಣ ವರದಿ ನೀಡುವಂತೆ ಸೂಚನೆ ನೀಡಿದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ, ಗುರುವಾಯನಕೆರೆಗೂ ಸ್ಥಳೀಯ ಕಾಲೇಜಿನ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹರಿಸಲಾಗುತ್ತಿದೆ ಎಂದು ಆರೋಪಿಸಿದಾಗ ಸಂಬಂಧಪಟ್ಟವರಿಗೆ ನೋಟೀಸು ನೀಡಿ ಕ್ರಮ ವಹಿಸುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದರು.
ಚಾರ್ಮಾಡಿ ರಸ್ತೆ ಪ್ರತ್ಯೇಕ ಸಭೆ
ಸೂಕ್ಷ್ಮ ಭಾಗವಾದ ಚಾರ್ಮಾಡಿ ಹೆದ್ದಾರಿ ಕಾಮಗಾರಿಯ ನಿರ್ವಹಣೆಗೆ ಸಂಬಂಧಿಸಿ ಗುತ್ತಿಗೆದಾರ ಸಂಸ್ಥೆಯಿಂದ ತಾಂತ್ರಿಕ ಕ್ರಿಯಾ ಯೋಜನೆ ಪಡೆದುಕೊಳ್ಳಬೇಕು, ಬಳಿಕ ಎಲ್ಲರನ್ನೂ ಸೇರಿಸಿಕೊಂಡು ಸಭೆ ನಡೆಸಲಾಗುವುದು ಎಂದು ಚೌಟ ತಿಳಿಸಿದರು.
ಈ ಹೆದ್ದಾರಿಯ ಇಕ್ಕೆಲಗಳಲ್ಲಿ 22 ಯಾರ್ಡ್‌ನಷ್ಟು ಜಾಗವನ್ನು ಬಿಟ್ಟುಕೊಟ್ಟಿರುವ ಬಗ್ಗೆ 1998ರಲ್ಲೇ ಗಜೆಟ್ ನೋಟಿಫಿ ಕೇಶನ್ ಆಗಿದ್ದರೂ ಮತ್ತೆ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದುಕೊಳ್ಳುವ ಪ್ರಕ್ರಿಯೆ ಅಗತ್ಯವಿದೆಯೇ ಇದರಿಂದ ವೃಥಾ ಕಾಲಹರಣವಾಗಲಿದೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದಾಗ, ಅಭಿವೃದ್ಧಿಯ ಸಂದರ್ಭ ನಿಗದಿತ ಸಂಖ್ಯೆ ಗಿಂತ ಮೀರಿದ ಮರಗಳನ್ನು ಕಡಿಯಬೇಕಾದರೆ ಅನುಮತಿ ಅಗತ್ಯ ಎಂದು ಡಿಸಿಎಫ್ ಆ್ಯಂಟನಿ ಮರಿಯಪ್ಪ ತಿಳಿಸಿದರು.
1 ತಿಂಗಳು ಶಿರಾಡಿ ಬಂದ್
ಮಾರ್ಚ್ 15ರಿಂದ ಶಿರಾಡಿ ಘಾಟ್‌ನ ಮೇಲ್ಭಾಗದ ಹೆದ್ದಾರಿ ಕಾಮಗಾರಿಗಾಗಿ 1 ತಿಂಗಳ ಕಾಲ ಹೆದ್ದಾರಿ ಸಂಚಾರ ಬಂದ್ ಮಾಡುವುದಾಗಿ ಹಾಸನ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ, ಇದು ಮಂಗಳೂರಿನವರಿಗೇ ಹೆಚ್ಚು ಪರಿಣಾಮ ಬೀರುವು ದರಿಂದ ಈ ಕುರಿತು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಚೌಟ ತಿಳಿಸಿದರು. ಹಾಸನ ಜಿಲ್ಲಾಧಿಕಾರಿಯವರೊಂದಿಗೆ ದ.ಕ ಜಿಲ್ಲಾಧಿಕಾರಿಯವರು ನಿರಂತರ ಸಂಪರ್ಕ ಇರಿಸಿಕೊಂಡು ಇದನ್ನು ನಿರ್ವಹಿಸಬೇಕಾಗಿದೆ ಎಂದು ಶಾಸಕ ಪೂಂಜ ಹೇಳಿದರು.







