ಮಂಗಳೂರು| ಬೈಕ್ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ
20ಕ್ಕೂ ಹೆಚ್ಚು ದ್ವಿಚಕ್ರ ವಾಹನ ವಶಕ್ಕೆ

ಮಂಗಳೂರು: ಬಸ್ ಮತ್ತು ರೈಲು ನಿಲ್ದಾಣಗಳು, ಜಾತ್ರೆ, ಕಂಬಳ ನಡೆಯುವ ಸ್ಥಳಗಳಲ್ಲಿ ಪಾರ್ಕ್ ಮಾಡಲಾಗು ತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳವು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಣಿಕಂಠ ಗೌಡ ಕೆ., ಕಾರ್ಕಳದ ಸತೀಶ್ ಬಂಗೇರ, ಮೂಡುಬಿದಿರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಮಣಿಕಂಠ ಗೌಡನು ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ.,ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ. ಮೆಕ್ಯಾನಿಕ್ ಆಗಿದ್ದ ಈತ ಇಗ್ನಿಷನ್ ಸಾಕೆಟ್‌ನ ಪ್ಲಗನ್ನು ಚಾಕಚಕ್ಯತೆಯಿಂದ ತಪ್ಪಿಸಿ, ಕ್ಷಣಾರ್ಧದಲ್ಲಿ ಕಳ್ಳತನ ಮಾಡಿಕೊಂಡು ಹೋಗುತಿದ್ದ. ರೀಸೇಲ್ ವ್ಯಾಲ್ಯೂ ಇರುವ ಬೈಕ್‌ಗಳನ್ನು ಕದಿಯುತ್ತಿದ್ದ ಈತ ಹೆಚ್ಚಾಗಿ ಹೀರೋ ಹೋಂಡಾ ಸ್ಲೆಂಡರ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಹೀಗೆ ಕದ್ದ ಕೆಲವು ಬೈಕ್ ಗಳನ್ನು ಮೂಡುಬಿದಿರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಕಂಠ ಸೊರಬ ತಾಲೂಕಿನವನಾಗಿದ್ದರೂ ಕುಟುಂಬದೊಂದಿಗೆ ಮೂಡುಬಿದಿರೆಯಲ್ಲಿ ವಾಸವಾಗಿದ್ದ. ಕದ್ದ ಬೈಕ್‌ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಮಣಿಕಂಠನಿಂದ ಕದ್ದ ಬೈಕ್‌ಗಳನ್ನು ಕಾರ್ಕಳದ ಸತೀಶ್ ಬಂಗೇರ, ಮೂಡುಬಿದಿರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರು ಖರೀದಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ವಾಹನಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಕಾರಣ ಸತೀಶ್ ಬಂಗೇರಾ, ದೀಕ್ಷಿತ್, ಸಂಗಣ್ಣ ಹೊನ್ನಳ್ಳಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರಿನ ಬಂದರು, ಪಾಂಡೇಶ್ವರ, ಬಜ್ಪೆ, ಮುಲ್ಕಿ, ಉಳ್ಳಾಲ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯ 15 ಪ್ರಕರಣ ಮತ್ತು ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ 5 ಪ್ರಕರಣ ಸಹಿತ 20 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.







