ಬಜ್ಪೆ: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

ಬಜ್ಪೆ: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಬಜ್ಪೆ ಮುಹಿಯುದ್ದಿನ್ ಜುಮ್ಮಾ ಮಸೀದಿ ವತಿಯಿಂದ ಶನಿವಾರ ಬಜ್ಪೆ ಜಂಕ್ಷನ್ ನಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಕ್ಫ್ ಬೋರ್ಡ್ ನಿಕಟಪೂರ್ವ ಅಧ್ಯಕ್ಷ ಶಾಫಿ ಸಅದಿ ಅವರು, ಕೇಂದ್ರ ಸರಕಾರ ತಿದ್ದುಪಡಿ ಮಾಡಲು ಹೊರಟಿರುವ ವಕ್ಫ್ ಕಾಯ್ದೆ ಕೇವಲ ಮುಸ್ಲಿಂ ವಿರೋಧಿ ಮಾತ್ರವಲ್ಲ ದೇಶದ ಸಂವಿಧಾನ ವಿರೋಧಿಯಾಗಿದೆ. ಆರಾಧನ ಸ್ಥಳಗಳ ಕಾಯ್ದೆ 1991ರ ಪ್ರಕಾರ ದೇಶದಲ್ಲಿ ಇರುವ ಧಾರ್ಮಿಕ ಸ್ಥಳಗಳು ಯಥಾ ಸ್ಥಿತಿಯಲ್ಲಿರಬೇಕು. ಆದರೆ ಕೇಂದ್ರ ಸರಕಾರ ತಿದ್ದುಪಡಿ ತರಲು ಹೊರಟಿದ್ದಾರೆ. ವಕ್ಫ್ ಎಂಬುದು ದೇವರ ಹೆಸರಿನಲ್ಲಿ ಸಮರ್ಪಿಸಲಾದ ದಾನವಾಗಿದ್ದು, ಯಾರಿಗೂ ಯಾವತ್ತೂ ಪರಭಾರೆ ಮಾಡಲಾಗದ, ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗೆ ಮಾತ್ರ ಬಳಸಬಹುದಾದ ಸೊತ್ತು. ಹಿಂಬಾಗಿಲಿನಿಂದ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊಡಿರುವ ಕೇಂದ್ರ ಸರಕಾರ ಮುಸ್ಲಿಮರನ್ನು ದಮನಿಸುವ ಕೋಮುವಾದಿ ಉದ್ದೇಶವನ್ನಷ್ಟೇ ಹೊಂದಿದೆ. ಹೊರತು ಯಾರನ್ನೂ ಉದ್ಧಾರ ಮಾಡುವು ಉದ್ದೇಶ ಹೊಂದಿಲ್ಲ. ದೇಶದ ಅಲ್ಪಸಂಖ್ಯಾತ ಸಮಾಜಕ್ಕೆ ಸಂರಕ್ಷಣೆ ಒದಗಿಸುವುದು ಯಾವುದೇ ಸರಕಾರದ ಜವಾಬ್ದಾರಿಯಾಗಿದ್ದು, ಕೇಂದ್ರ ಸರಕಾರವು ಪ್ರಸ್ತಾವಿತ ಮಸೂದೆಯನ್ನು ಹಿಂದೆಗೆಯಲೇಬೇಕು ಎಂದು ಆಗ್ರಹಿಸಿದರು.
ಬಳಿಕ ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲೆ ಈಸ್ಟ್ ಕಾರ್ಯದರ್ಶಿ ಯಾಸರ್ ಅರಫತ್ ಕೌಸರಿ ಮಾತನಾಡಿದರು.
ಪ್ರತಿಭಟನಾ ಧರಣಿಯಲ್ಲಿ ಎಸ್ಡಿಪಿಐ ಮಂಗಳೂರು ನಗರಾಧ್ಯಕ್ಷ ಜಲೀಲ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಬಜ್ಪೆ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಮೊದಲಾದವರು ಇದ್ದರು. ಪ್ರತಿಭಟನೆಗೂ ಮುನ್ನ ಮುಹಿಯುದ್ದೀನ್ ಜುಮ್ಮಾ ಮಸೀದಿಯಿಂದ ಬಜ್ಪೆ ಜಂಕ್ಷನ್ ವರೆಗೆ ಪ್ರತಿಭಟನಾ ಜಾಥಾ ನಡೆಯಿತು.





