ಮಂಗಳೂರು: ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಮಂಗಳೂರು: ಚುನಾವಣೆಯ ಸಂದರ್ಭ ನೀಡಿದ ಭರವಸೆಯಂತೆ ರಾಜ್ಯ ಸರಕಾರವು 6 ಸಾವಿರ ರೂ. ಮಾಸಿಕ ಗೌರವ ಧನ ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು ಅಧೀನದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ರಿ)ದ ದ.ಕ. ಜಿಲ್ಲಾ ಸಮಿತಿಯು ಬುಧವಾರ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷೆ ಭವ್ಯಾ ಮಾತನಾಡಿ ಕಳೆದ ಆರು ವರ್ಷಗಳಿಂದ ಬಿಸಿಯೂಟ ನೌಕರರಿಗೆ ವೇತನ ಏರಿಕೆಯಾಗಿಲ್ಲ.ಕೇಂದ್ರ ಸರಕಾರವು 2014ರಿಂದ ಅನುದಾನವನ್ನು ಏರಿಕೆ ಮಾಡಲಿಲ್ಲ. ಎರಡೂ ಸರಕಾರಗಳು ಬಿಸಿಯೂಟ ನೌಕರರನ್ನು ಶೋಷಣೆ ಮಾಡುತ್ತಾ ಬಂದಿದೆ. ಎಲ್ಲಾ ಆಹಾರವಸ್ತುಗಳ ದರವನ್ನು ಏರಿಕೆ ಮಾಡಿದೆ. ಆದರೆ ಮಾಸಿಕ ವೇತನ ಏರಿಕೆಗಾಗಿ ಇಲಾಖೆಗೆ ಹಣವೇ ನೀಡುತ್ತಿಲ್ಲವೆಂದು ಆರೋಪಿಸಿದರು.
ಕೇರಳ, ಪಾಂಡಿಚೇರಿ,ಹರಿಯಾಣ, ತಮಿಳಾನಾಡಿನಂತೆ 7,000ದಿಂದ 12,000 ರೂ.ವರೆಗೆ ವೇತನ ನೀಡಬೇಕು ಎಂದು ಒತ್ತಾಯಿಸಿದ ಭವ್ಯಾ ರಾಜ್ಯ ಸರಕಾರವು ಈಗಾಗಲೇ ಒಪ್ಪಿಕೊಂಡಂತೆ ನಿವೃತ್ತಿಯಾದ ನೌಕರರಿಗೆ ಇಡಿಗಂಟು ನೀಡಲೇಬೇಕು ಎಂದರು.
ಸಂಘದ ಗೌರವ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿ ಬಿಸಿಯೂಟ ನೌಕರರಿಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕು ಎಂದರಲ್ಲದೆ, ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡ ಬಾರದು. ಹಾಜರಾತಿಯ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ನಾಯಕಿಯರಾದ ಶಬಾನಾ ಭಾನು,ಹರಿವಣಿ,ಅನಿತಾ,ಉಮಾವತಿ, ಹರಿಣಾಕ್ಷಿ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜಾ ಕಾರ್ಯಕ್ರಮ ನಿರೂಪಿಸಿದರು.