ವಿದ್ಯಾರ್ಥಿ ತ್ವಯ್ಯಿಬ್ ಸುರಿಬೈಲ್‌ರ ʼಸಾಮ್ರಾಟʼ ಕಾದಂಬರಿ ಬಿಡುಗಡೆ

ಕೊಣಾಜೆ: ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿ ತ್ವಯ್ಯಿಬ್ ಸುರಿಬೈಲ್ ಬರೆದ ʼಸಾಮ್ರಾಟ’ ಕಾದಂಬರಿಯನ್ನು ಗುರುವಾರ ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ, ಲೇಖಕ ಚಂದ್ರಶೇಖರ ಪಾತೂರ್ ಕಾದಂಬರಿಯನ್ನು ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ಸಾಹಿತ್ಯದತ್ತ ವಿದ್ಯಾರ್ಥಿ ತ್ವಯ್ಯಿಬ್ ಸುರಿಬೈಲ್‌ರ ಅಪಾರ ಒಲವು ಅವರನ್ನು ಕಾದಂಬರಿ ಬರೆಯುವಂತೆ ಮಾಡಿದೆ. ಸಾಮಾನ್ಯವಾಗಿ ಸಾಹಿತ್ಯ ವಿದ್ಯಾರ್ಥಿಗಳು ಕವನ, ಚುಟುಕು, ಹನಿಗವನ ಬರೆಯಲು ಆಸಕ್ತಿ ವಹಿಸುತ್ತಾರೆ. ಆದರೆ ತ್ವಯ್ಯಿಬ್ ಸುರಿಬೈಲ್ ಮೊದಲ ಕೃತಿಯಾಗಿ ಕಾದಂಬರಿಯನ್ನು ಬರೆದು ಆಶ್ಚರ್ಯ ಹುಟ್ಟಿಸಿದ್ದಾರೆ. ಭವುಷ್ಯದಲ್ಲಿ ಇನ್ನಷ್ಟು ಸಾಹಿತ್ಯವನ್ನು ಸೃಷ್ಟಿಸಲಿ ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಕಾರ್ಯಾಧ್ಯಕ್ಷ ಪ್ರಶಾಂತ ಕಾಜವ್ ಕಾದಂಬರಿಯ ಪ್ರಥಮ ಪ್ರತಿಯನ್ನು ಸ್ವೀಕರಿಸಿ ಶುಭ ಹಾರೈಸಿದರು. ಪತ್ರಕರ್ತ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು. ಆಕೃತಿ ಆಶಯ ಪಬ್ಲಿಕೇಶನ್‌ನ ಸ್ಥಾಪಕ ಕಲ್ಲೂರು ನಾಗೇಶ, ಲೇಖಕ ಇಸ್ಮತ್ ಪಜೀರ್ ಮಾತನಾಡಿದರು. ಲೇಖಕ ತ್ವಯ್ಯಿಬ್ ಸುರಿಬೈಲ್ ಅನಿಸಿಕೆ ವ್ಯಕ್ತಪಡಿಸಿದರು.
ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಯ ಮುಖ್ಯಸ್ಥೆ ತನುಜಾ ಎಂ., ಕಾಲೇಜಿನ ಆಂತರಿಕ ಭರವಸಾ ಕೋಶ ಇದರ ಮುಖ್ಯಸ್ಥೆ ಕವಿತಾ ಎಂ., ಉಪನ್ಯಾಸಕ ಡಾ. ಪವನ್, ಮೇಲ್ತೆನೆಯ ಅಧ್ಯಕ್ಷ ವಿ.ಇಬ್ರಾಹೀಂ ನಡುಪದವು, ಮಾಜಿ ಅಧ್ಯಕ್ಷರಾದ ಇಸ್ಮಾಯೀಲ್ ಮಾಸ್ಟರ್, ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಹೈದರಾಲಿ ಸ್ವಾಗತಿಸಿದರು. ವಿದ್ಯಾರ್ಥಿನಿ ತಶ್ರೀನಾ ವಂದಿಸಿದರು. ವಿದ್ಯಾರ್ಥಿ ಸಹೀರ್ ಕಾರ್ಯಕ್ರಮ ನಿರೂಪಿಸಿದರು.







