ಉಚ್ಚಿಲ ಮಸೀದಿಯಲ್ಲಿ ವಕ್ಫ್ ತಿದ್ದುಪಡಿ ವಿರುದ್ಧ ಖಂಡನಾ ಸಭೆ

ಉಳ್ಳಾಲ : ಜುಮ್ಮಾ ಮಸೀದಿ ಉಚ್ಚಿಲ 407 ಇದರ ಆಶ್ರಯದಲ್ಲಿ ಜುಮ್ಮಾ ನಮಾಝ್ ಬಳಿಕ ವಕ್ಫ್ ತಿದ್ದುಪಡಿ ವಿರುದ್ಧ ಖಂಡನಾ ಸಭೆ ಹಾಗೂ ವಕ್ಫ್ ಕಾಯಿದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವು ಮಸೀದಿ ವಠಾರದಲ್ಲಿ ನಡೆಯಿತು.
ಜಮಾಅತ್ ಸದಸ್ಯರು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಭಿತ್ತಿ ಪತ್ರ ಪ್ರದರ್ಶನ ಮಾಡಿ ಪ್ರತಿಭಟಿಸಿದರು.
ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಮುಸ್ತಾಕ್ ಅಹ್ಮದ್ ಎನ್ನಬೈಲ್ ಅವರು ಭಾರತದಲ್ಲಿ 33 ಲಕ್ಷ ಹೆಕ್ಟೇರ್ ಭೂಮಿ ವಕ್ಫ್ ದಾಖಲೀಕರಣದಲ್ಲಿ ಇರಬೇಕಿತ್ತು. ಆದರೆ ಅಷ್ಟು ಭೂಮಿ ವಕ್ಫ್ ದಾಖಲೆಯಲ್ಲಿ ಇಲ್ಲ. ಭೂಮಿಯನ್ನು ವಕ್ಫ್ ದಾಖಲೀಕರಣ ಮಾಡಲು ಅಷ್ಟು ಸುಲಭವಿಲ್ಲ. ವಕ್ಫ್ ನಲ್ಲಿ 9.25 ಲಕ್ಷ ಎಕರೆ ಭೂಮಿ ಮಾತ್ರ ದಾಖಲೀಕರಣ ಆಗಿದೆ. ಈ ವಕ್ಫ್ ಭೂಮಿ ವಾರ್ಷಿಕ ಆದಾಯ 12.500 ಕೋಟಿ ಇರಬೇಕಿತ್ತು. ಆದರೆ ಈಗ ಆದಾಯ ಇರುವುದು 1200 ಕೋಟಿ ಮಾತ್ರ ಎಂದರು.
ಸ್ವಾತಂತ್ರ್ಯ ವೇಳೆ ಬ್ರಿಟಿಷರು ಭಾರತ ವಿಭಜಿಸಿದಾಗ ಮುಸ್ಲಿಮರು ಬಿಟ್ಟು ಹೋದ ಜಾಗವನ್ನು ಒಗ್ಗೂಡಿಸಿ ದಾಖಲೀಕರಣ ಮಾಡಲು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು 1954 ರಲ್ಲಿ ವಕ್ಫ್ ಕಾಯಿದೆ ಜಾರಿ ಮಾಡಿದ್ದರು. ಇದನ್ನು ಈಗಿನ ಸರ್ಕಾರ ತಿದ್ದುಪಡಿ ಮಾಡಲು ಹೊರಟಿದೆ. ದಾಖಲೆ ಇಲ್ಲದ ಜಾಗದ ದಾಖಲೆಗಳನ್ನು ಮೂರು ತಿಂಗಳ ಒಳಗೆ ತಯಾರಿಸಿ ನೀಡಬೇಕು ಎಂದರೆ ಯಾರಿಗೆ ಸಾಧ್ಯ ಎಂದು ಪ್ರಶ್ನಿಸಿದರು.
ಉಚ್ಚಿಲ ಮಸೀದಿ ಖತೀಬ್ ಇಬ್ರಾಹಿಂ ಫೈಝಿ ದುಆ ನೆರವೇರಿಸಿದರು.ಜಾಫರ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಭೆಯಲ್ಲಿ ಮಜೀದ್ ಹಾಜಿ ಉಚ್ಚಿಲ, ಸೋಮೇಶ್ವರ ಪುರಸಭೆ ಸದಸ್ಯ ಸಲಾಂ ಉಚ್ಚಿಲ, ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ ಉಪಸ್ಥಿತರಿದ್ದರು. ಸಲಾಂ ಉಚ್ಚಿಲ ಸ್ವಾಗತಿಸಿದರು.
ಕೋಶಾಧಿಕಾರಿ ಹಸೈನಾರ್ ಹಾಜಿ ವಂದಿಸಿದರು.