ಸುರತ್ಕಲ್: ಖಂಡಿಗೆ ನಂದಿನಿ ನದಿ ಶೀಘ್ರ ಪುರುಜ್ಜೀವನಕ್ಕೆ ಲೋಕಾಯುಕ್ತ ಸೂಚನೆ

ಸುರತ್ಕಲ್: ಇತಿಹಾಸ ಪ್ರಸಿದ್ಧ ಖಂಡಿಗೆ ಶ್ರೀ ಉಳ್ಳಾಯ ಧರ್ಮರಸು ದೈವಸ್ಥಾನದ ಬಳಿ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿರುವ ಸ್ಥಳಕ್ಕೆ ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.
ಶನಿವಾರ ಮಧ್ಯಾಹ್ನ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶ್ರೀನಿವಾಸ ಆಸ್ಪತ್ರೆ ನದಿಗೆ ಮಣ್ಣು ತುಂಬಿಸಿ ನದಿ ಒತ್ತುವರಿ ಮಾಡಿಕೊಂಡಿರುವುದು ಮತ್ತು ನದಿಗೆ ಆಸ್ಪತ್ರೆಯ ಕಲುಷಿತ ನೀರು ಹರಿಯುತ್ತಿರುವ ಸ್ಥಳವನ್ನು ಪರಿಶೀಲಿಸಿದರು. ಬಳಿಕ ಖಂಡಿಗೆ ಉಳ್ಳಾಯ ಧರ್ಮರಸು ದೈವಸ್ಥಾನ ಹಾಗೂ ಕಲುಷಿತ ಗೊಂಡಿರುವ ನದಿಯನ್ನು ವೀಕ್ಷಿಸಿದರು.
ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ. ಲಕ್ಷ್ಮೀಕಾಂತ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿಗೆ ಸದಂಬಂಧ ಪಟ್ಟ ಗ್ರಾಮ ಪಂಚಾಯತ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಏನು ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಮನಪಾ ಆಯುಕ್ತರು, ನದಿ ನೀರು ಕಲುಷಿತಗೊಳ್ಳಲು ಕಾರಣೀಕರ್ತರನ್ನು ಗುರುತಿಸಿ ನೋಟೀಸ್ ಜಾರಿ ಮಾಡಲಾಗಿದೆ ಎಂದರು.
ಇದಕ್ಕೆ ಆಕ್ರೋಶಗೊಂಡ ಉಪಲೋಕಾಯುಕ್ತರು, ನೋಟಿಸ್ ನೀಡುವ ಅವಶ್ಯಕತೆ ಏನಿದೆ. ಖಾಸಗಿಯವರು ನದಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ನದಿ ನೀರು ಸಂಪೂರ್ಣ ಕಲುಷಿತಗೊಂಡಿರುವುದು ಯಾವುದೇ ಪರೀಕ್ಷೆಗಳನ್ನು ಮಾಡದೆಯೇ ಕಾಣಿಸುತ್ತಿದೆ. ಹೀಗಿ ದ್ದರೂ ಕ್ರಮಕೈಗೊಳ್ಳುವ ಬದಲು ನೋಟಿಸ್ ನೀಡಲಾಗಿದೆ. ಕೇವಲ ನೋಡಿಸ್ ಕೊಟ್ಟರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವೂ ಮಾಡಬೇಕು. ನದಿಗೆ ಮಣ್ಣುಹಾಕಿ ತುಂಬಿಸುತ್ತಿದ್ದಾರೆ. ಇದರಿಂದ ಕೆರೆಯೇ ಇಲ್ಲದಾಗುವ ಭೀತಿ ಇದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪ ಡಿಸಿದರು. ಅಲ್ಲದೆ, ಶ್ರೀನಿವಾಸ ಆಸ್ಪತ್ರೆ ನದಿಗೆ ಮಣ್ಣು ತುಂಬಿಸಿ ನದಿ ಒತ್ತುವರಿ ಮಾಡಿಕೊಂಡಿರುವುದನ್ನು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ನದಿಯಲ್ಲಿ ಮೊದಲು ಇಲ್ಲಿನ ಮಕ್ಕಳು, ನಾಗರಿಕರು ಮೀನು ಹಿಡಿದುಕೊಂಡು ಆರಾಮವಾಗಿ ಆಟವಾಡಿ ಕೊಂಡಿದ್ದರು. ಈಗ ನದಿ ಸಂಪೂರ್ಣ ಕಲುಷಿತ ಗೊಂಡಿರುವಾಗ ಯಾರೂ ಇಲ್ಲಿಗೆ ಬರುವುದಿಲ್ಲ. ಕಲುಷಿತ ಗೊಂಡಿರುವ ನಂದಿನಿ ನದಿಯನ್ನು ಪುನರುಜ್ಜೀವನ ಗೊಳಿಸಲು ಎಷ್ಟು ದಿನಗಳ ಕಾಲಾವಕಾಶ ಬೇಕು ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ ಲೋಕಾಯುಕ್ತರು, ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಸರಿಪಡಿಸಿ ವರದಿ ನೀಡಬೇಕು. ಇಲ್ಲವಾದಲ್ಲಿ ನಾನೇ ನಾಗರಿಕರೊಂದಿಗೆ ಸೇರಿಕೊಂಡು ಹೋರಾಟ ನಡೆಸುತ್ತೇನೆ. ಆ ಬಳಿಕ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ತಲೆದಂಡ ತೆರಬೇಕಾಗಿ ಬರಬಹುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ಮಂಗಳೂರು - ಉಡುಪಿ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ, ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್ ಮತ್ತು ಲೋಕಾಯುಕ್ತ ಅಧಿಕಾರಿಗಳು, ಚೇಳಾಯರು ಗ್ರಾಮ ಪಂಚಾಯತ್ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ನಂದಿನಿ ನದಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ಖಂಡಿಗೆ ಉಳ್ಳಾಯ ಧರ್ಮರಸು ದೈವಸ್ಥಾನ ಆಡಳಿತ ಸಮಿತಿ, ಸುರತ್ಕಲ್ ಠಾಣೆಯ ಪೊಲೀಸರು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.
ಮುಂಚೂರು ವೆಟ್ ವೆಲ್ ನ ಹತ್ತಿರದ ಒಳಚರಂಡಿಯ ಕೊಳಚೆ ನೀರು, ಕೊಡಿಪಾಡಿಯಲ್ಲಿ ನಿರ್ಮಾಣವಾಗಿ ರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಅಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೋಟೇಲ್ ಗಳ ತ್ಯಾಜ್ಯ ನೀರುಗಳನ್ನು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದ್ದು, ಶೀಘ್ರ ನದಿಯ ಪುನರುಜ್ಜೀವನ ಗೊಳಿಸಬೇಕಂದು ಆಗ್ರಹಿಸಿ ನಂದಿನಿ ನದಿ ಉಳಿಸಿ ಹೋರಾಟ ಸಮಿತಿಯು ಮಾ.4ರಂದು ಗ್ರಾಮಸ್ಥರನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿತ್ತು.
ತಹಶೀಲ್ದಾರ್ ಗೈರು: ನೊಟೀಸ್ ನೀಡಲು ಲೋಕಾಯುಕ್ತ ಸೂಚನೆ
ಇತಿಹಾಸ ಪ್ರಸಿದ್ಧ ಖಂಡಿಗೆ ಶ್ರೀ ಉಳ್ಳಾಯ ಧರ್ಮರಸು ದೈವಸ್ಥಾನದ ಬಳಿ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿರುವ ಸ್ಥಳಕ್ಕೆ ಉಪಲೋಕಾಯುಕ್ತರು ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು. ಈ ವೇಳೆ ತಹಶೀಲ್ದಾರ್ ಹಾಗೂ ಉಪ ತಹಶೀಲ್ದಾರ್ ಕುರಿತು ಲೋಕಾಯುಕ್ತರು ವಿಚಾರಿಸಿ ದರು. ಅವರು ಗೈರಾಗಿರುವುದು ತಿಳಿದಾಕ್ಷಣ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಬರುವ ಮಾಹಿತಿ ಇದ್ದರೂ ಸ್ಥಳಕ್ಕೆ ಬಾರದೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಕಾರಿಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶ್ರೀನಿವಾಸ್ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಉಪಲೋಕಾಯುಕ್ತರ ಸೂಚನೆ
ನಣದಿನಿ ನದಿ ಕಲುಷಿತಗೊಂಡಿರುವ ಕುರಿತು ನಂದಿನಿ ನದಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಾಗರೀಕರ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ನದಿ ಕಲುಷಿತ ಗೊಳ್ಳಲು ಕಾರಣವಾಗಿರುವ ಸ್ಥಳಗಳನ್ನು ಪರಿಶೀಲಿಸಿದರು. ಈ ವೇಳೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಯವರು ನದಿಗೆ ಮಣ್ಣು ತುಂಬಿಸಿ ಕಾಮಗಾರಿ ನಡೆಸುವುದನ್ನು ಪತ್ತೆಹಚ್ಚಿ ದರು. ಈ ವೇಳೆ ಸ್ಥಳದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ. ಲಕ್ಷ್ಮೀಕಾಂತ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ನದಿಯನ್ನು ಒತ್ತುವರಿ ಮಾಡಿಕೊಂಡಿರುವ ಆಸ್ಪತ್ರೆಯ ವಿರುದ್ಧ ಶೀಘ್ರ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.







