ಅಂಚೆ ಜನಸಂಪರ್ಕ ಅಭಿಯಾನ| ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಮಾಹಿತಿ

ಮಂಗಳೂರು: ಭಾರತೀಯ ಅಂಚೆ ಇಲಾಖೆಯು ಅತ್ಯಂತ ವಿಶ್ವಾಸಾರ್ಹ ಸೇವೆ ನೀಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಅಂಚೆ ಅಪಘಾತ ವಿಮಾ ಯೋಜನೆಯು ಸರಳವಾದ ಹಾಗೂ ಜನಸಾಮಾನ್ಯರ ಕೈಗೆಟುಕುವ ಉಪಯುಕ್ತ ವಿಮಾ ಯೋಜನೆಯಾಗಿದೆ ಎಂದು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ಎಂ.ಸುಧಾಕರ ಮಲ್ಯ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಮತ್ತು ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಇದರ ಸಹಯೋಗದಲ್ಲಿ ರವಿವಾರ ನಗರದ ಅತ್ತಾವರ ಸರಕಾರಿ ಪ್ರೌಢಶಾಲೆ ಯಲ್ಲಿ ನಡೆದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಅವರು ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ವಿಮಾ ಕಂತು 549 ರೂ.ಅಥವಾ 749 ರೂ. ಪಾವತಿಸಿದ ಬಳಿಕ ಯಾವುದೇ ಅಂಚೆ ಕಚೇರಿಯ ಮೂಲಕ ದಾಖಲೆ ಸಲ್ಲಿಸಿ ಸಣ್ಣಪುಟ್ಟ ಅಪಘಾತ ಸಂಭವಿಸಿದಾಗ ನಿರ್ದಿಷ್ಟ ವಿಮಾ ಪರಿಹಾರ ಮೊತ್ತ ಪಡೆಯಬಹುದು. ಶಾಶ್ವತ ಅಂಗವೈಕಲ್ಯ, ಮರಣ ಸಂದರ್ಭ ಪೂರ್ಣ ಪ್ರಮಾಣದ ವಿಮಾ ಮೊತ್ತ ಪಡೆಯಬಹುದು. ಅಂಚೆ ಜನಸಂಪರ್ಕ ಅಭಿಯಾನದ ಮೂಲಕ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಲಾಗುತ್ತಿದೆ. ಮಂಗಳೂರಿನಲ್ಲಿ ಇದುವರೆಗೆ 75 ಮಾಹಿತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾನೂನು ಸಲಹೆಗಾರ , ವಕೀಲ ರಾಮಪ್ರಸಾದ್ ಮುಖ್ಯ ಅತಿಥಿಯಾಗಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಯೆಯ್ಯಾಡಿ ವರದಿ ವಾಚಿಸಿದರು.
ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ, ಸಂಘದ ಸ್ಥಾಪಕ ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ, ಕೋಶಾಧಿಕಾರಿ ಸತೀಶ್ ಪೂಜಾರಿ ಉರ್ವ, ಸುರತ್ಕಲ್ ಘಟಕದ ಅಧ್ಯಕ್ಷ ಜಪ್ರುಲ್ಲಾ ಕೃಷ್ಣಾಪುರ , ಬಿ.ಸಿ.ರೋಡ್ ಘಟಕದ ಕಾರ್ಯದರ್ಶಿ ಶ್ರೀಕಾಂತ್ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿ ಕಿರಣ್ ಲೇಡಿಹಿಲ್ ಸ್ವಾಗತಿಸಿ, ಭವಾನಿ ಶಂಕರ್ ವಂದಿಸಿದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.