ತುಳುವರ ಪಾರಂಪರಿಕ ಜ್ಞಾನದ ದಾಖಲೀಕರಣ ಆಗಬೇಕು: ಪ್ರೊ. ಜಯಕರ ಭಂಡಾರಿ

ಮಂಗಳೂರು, ಮಾ.11: ತುಳುನಾಡಿನ ಗ್ರಾಮೀಣ ಜನರಲ್ಲಿ ಅಪೂರ್ವವಾದ ಪಾರಂಪರಿಕ ಜ್ಞಾನ ಭಂಡಾರ ಇತ್ತು. ಅದನ್ನು ಸೂಕ್ತವಾಗಿ ದಾಖಲೀಕರಣ ಮಾಡುವ ಅವಶ್ಯಕತೆ ಇದೆ ಎಂದು ಸತೀಶ್ ಪೈ-ದಯಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ತುಳುಭವನದಲ್ಲಿ ಆಯೋಜಿಸಲಾದ ಅಕಾಡಮಿ ಪ್ರಕಟಿತ ಮಣಿ ಮನಮೋಹನ ರೈ ಅವರ ’ತುಳುವರೆ ಪ್ರಾಣಿ ವೈದ್ಯ ಒಂಜಿ ಸ್ಥೂಲ ಅಧ್ಯಯನ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಲೇಖಕಿ ಜಯಲಕ್ಷ್ಮಿ ಪ್ರಸಾದ್ ರೈ ಪುಸ್ತಕದ ಪರಿಚಯ ಮಾಡಿದರು. ಲೇಖಕಿ ಮಣಿ ಎಂ ರೈ ಈ ಪುಸ್ತಕ ಬರವಣಿಗೆಯ ತನ್ನ ಕ್ಷೇತ್ರ ಕಾರ್ಯದ ಬಗ್ಗೆ ಮಾತನಾಡಿದರು. ತೋಕೂರು ಗುತ್ತು ದಿವಾಕರ ಆಳ್ವ, ಮನಮೋಹನ್ ರೈ ಉಪಸ್ಥಿತರಿದ್ದರು.
ತುಳು ಅಕಾಡಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಅಕಾಡಮಿಯ ಸದಸ್ಯ ಬಾಬು ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.
Next Story