ಗುಡ್‌ಫ್ರೈಡೆ ದಿನ ಸಿಇಟಿ ಪರೀಕ್ಷೆ: ಮುಂದೂಡಲು ಶಾಸಕ ಐವನ್ ಡಿಸೋಜ ಆಗ್ರಹ

ಮಂಗಳೂರು, ಮಾ.16: ಉನ್ನತ ವಿದ್ಯಾಭ್ಯಾಸಕ್ಕೆ ನಿರ್ಧರಿತವಾಗಿರುವ ಸಿಸಿಟಿ(ಸಾಮಾನ್ಯ ಪ್ರವೇಶ ಪರೀಕ್ಷೆ)ಯು ಎಪ್ರಿಲ್ ತಿಂಗಳ 16,17 ಮತ್ತು 18ರಂದು ನಿಗದಿಯಾಗಿದೆ.
ಕ್ರೈಸ್ತ ಸಮುದಾಯಕ್ಕೆ ಎ.16, 17 ಮತ್ತು 18 ಈ ಮೂರು ದಿನಗಳು ಪವಿತ್ರ ದಿನಗಳಾಗಿವೆ. 18ರಂದು ಗುಡ್‌ಫ್ರೈಡೆ ಸರಕಾರಿ ರಜಾದಿನವಾಗಿದ್ದರೂ ಅಂದು ಸಿಇಟಿ ಪರೀಕ್ಷೆ ಯನ್ನು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಡೆಸಲು ನಿರ್ಧರಿಸಿದೆ.
ಆನೇಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು ಸಿಇಟಿಗೆ ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಕ್ರೈಸ್ತ ಸಮುದಾಯಕ್ಕೆ ಸೇರಿರುವ ಸಹಸ್ರಾರು ಮಂದಿ ಈಗಾಗಲೇ ಸಿಇಟಿ ಬರೆಯಲು ಅರ್ಜಿ ಸಲ್ಲಿಸಿದ್ದಾರೆ.
ಹೋಲಿ ವೀಕ್ ನಲ್ಲಿ ಸೋಮವಾರದಿಂದ ಆದಿತ್ಯವರಾದ ವರೆಗೆ ಕ್ರೈಸ್ತರು ಉಪವಾಸ ಮತ್ತು ಚರ್ಚ್‌ಗಳಲ್ಲಿ ಪ್ರಾರ್ಥನೆಗಳಲ್ಲಿ ತೊಡಗಿರುತ್ತಾರೆ. ಎ.19 ರಂದು ರಜೆ (ನಿರ್ಬಂಧಿತ ರೆಜೆ) ಇದೆ. ಎ.20ರಂದು ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಅಲ್ಲದೆ ಈ ವರೆಗೆ ನಡೆದ ಎಲ್ಲ ಪರೀಕ್ಷೆಗಳನ್ನು ಶನಿವಾರ ಮತ್ತು ಆದಿತ್ಯವಾರ ನಡೆಸಲಾಗಿದೆ. ಗುಡ್‌ಫ್ರೈಡೆ ದಿನ ನಿಗದಿಪಡಿಸಲಾದ ಪರೀಕ್ಷೆಯನ್ನು ಮುಂದೂಡುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.